Bidar | ಮತದಾರರ ಪಟ್ಟಿ ಪರಿಷ್ಕರಣೆ ಮಹಿಳಾ ಸ್ನೇಹಿಯಾಗಿರಲಿ : ಜನವಾದಿ ಮಹಿಳಾ ಸಂಘಟನೆ ಮನವಿ

ಬೀದರ್ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಅನುಕೂಲವಾಗುವ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘಟನೆ, ಮತದಾರರ ಪಟ್ಟಿಯ ಶುದ್ಧೀಕರಣ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅರ್ಹ ಮತದಾರರನ್ನು ಒಳಗೊಳ್ಳುವ ಬದಲು ಹೊರತಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಬಿಹಾರ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುವುದನ್ನು ಉಲ್ಲೇಖಿಸಿರುವ ಸಂಘಟನೆ, ಕರ್ನಾಟಕದಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದೆ.
ಹೆಸರು, ಇನಿಷಿಯಲ್, ಸ್ಪೆಲ್ಲಿಂಗ್ ಅಥವಾ ಲಿಂಗ ಸೂಚಕದ ಸಣ್ಣಪುಟ್ಟ ವ್ಯತ್ಯಾಸಗಳನ್ನು ಆಧಾರವನ್ನಾಗಿ ಮಾಡಿಕೊಂಡು ಮತದಾರರನ್ನು ಅನುಮಾನಾಸ್ಪದ ಪಟ್ಟಿಗೆ ಸೇರಿಸಬಾರದು. ಮದುವೆಯಾದ ಮಹಿಳೆಯರು, ವಲಸಿಗರು, ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಿತರು ಹಾಗೂ ಟ್ರಾನ್ಸ್‌ಜೆಂಡರ್ ಸಮುದಾಯದವರು ದಾಖಲೆಗಳ ಸಮಸ್ಯೆಯಿಂದ ಮತದಾನದ ಹಕ್ಕು ಕಳೆದುಕೊಳ್ಳದಂತೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಗತ್ಯ ದಾಖಲೆಗಳ ಕೊರತೆಯಿರುವ ಮಹಿಳೆಯರಿಗೆ ವಾಸಸ್ಥಳ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ ಹಾಗೂ ಕುಟುಂಬ ದಾಖಲಾತಿಗಳನ್ನು ಪಡೆಯಲು ಜಿಲ್ಲಾಡಳಿತ ನೆರವು ನೀಡಬೇಕು. ಯಾವುದೇ ರೀತಿಯ ಧರ್ಮ, ಜಾತಿ ಅಥವಾ ಇತರೆ ಪಕ್ಷಪಾತದ ಧೋರಣೆ ತೋರದಂತೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಅಲ್ಲದೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಬಿಎಲ್‌ಒಗಳ ಮೇಲೆ ಅನಗತ್ಯ ಒತ್ತಡ ಹೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ್, ಬೀದರ್ ತಾಲೂಕು ಅಧ್ಯಕ್ಷೆ ಲೀಲಾ ಸಂಗ್ರಾಮ್ ಸೇರಿದಂತೆ ಸಂಘಟನೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.






