Bidar | ನಾಗರಹಾವು ಕಡಿದು ವಾಟರ್ಮ್ಯಾನ್ ಮೃತ್ಯು

ಬೀದರ್: ನಾಗರಹಾವು ಕಡಿದು ಗ್ರಾಮ ಪಂಚಾಯತ್ ವಾಟರ್ ಮ್ಯಾನ್ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಹುಲಸೂರ್ ತಾಲೂಕಿನ ಸೋಲದಾಪಕಾ ಗ್ರಾಮದಲ್ಲಿ ನಡೆದಿದೆ.
ಸೋಲದಾಪಕ ಗ್ರಾಮದ ಭೀಮ್ ಜಾಧವ್ (48) ಮೃತಪಟ್ಟವರು.
ಹುಲಸೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲಹಳ್ಳಿ ರಸ್ತೆಯ ಬಳಿಯ ನೀರಿನ ಟ್ಯಾಂಕ್ ಗೆ ನೀರು ಸರಬರಾಜು ಮಾಡಲು ತೆರಳಿದ್ದ ವೇಳೆ ಟ್ಯಾಂಕ್ ಸಮೀಪ ಭೀಮ್ ಅವರ ಕಾಲಿಗೆ ನಾಗರಹಾವು ಕಚ್ಚಿದೆ. ಹಾವು ಕಡಿತದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಲಸೂರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ.
ಹುಲ್ಲು ತೆರವುಗೊಳಿಸದಿದ್ದಕ್ಕೆ ಆಕ್ರೋಶ : ನೀರಿನ ಟ್ಯಾಂಕ್ ಸುತ್ತಮುತ್ತ ಹುಲ್ಲು ಬೆಳೆದು ಓಡಾಡಲು ತೊಂದರೆಯಾಗುತ್ತಿದೆ ಎಂದು ಎರಡು ತಿಂಗಳ ಹಿಂದೆಯೇ ಗ್ರಾಮ ಪಂಚಾಯತ್ ಗೆ ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಟ್ಯಾಂಕ್ ಸುತ್ತಮುತ್ತ ದಟ್ಟವಾಗಿ ಹುಲ್ಲು ಬೆಳೆದಿದ್ದರಿಂದ ಹಾವುಗಳು ವಾಸವಾಗಿದ್ದವು. ಹುಲ್ಲು ತೆರವುಗೊಳಿಸಿದ್ದರೆ ಈ ಘಟನೆ ತಪ್ಪಿಸಬಹುದಿತ್ತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಹುಲಸೂರ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಹುಲಸೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.






