ಬೀದರ್ | ಸಿಎಂ ಬದಲಾವಣೆಯಾದರೆ ಹೋರಾಟ: ಬಸವರಾಜ ಮಾಳಗೆ

ಬೀದರ್: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ಹೋರಾಟ ನಡೆಸಲಾಗುವುದು ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಮಾಳಗೆ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಮಂಗಳವಾರ ಕರೆ ಸುದ್ದಿಗೋಷ್ಠಿಯಲ್ಲಿ ಡೆಸಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಶೋಷಿತರಿಗೆ, ಹಿಂದುಳಿದವರಿಗೆ ಮತ್ತು ದಲಿತರಿಗೆ ಮೀಸಲಾತಿ ಸಿಗಬೇಕೆಂದು ಸಮೀಕ್ಷೆ ಮಾಡಿಸಲಾಗಿತ್ತು. ಸದ್ಯ ಸಿಎಂ ಸಿದ್ಧರಾಮಯ್ಯರನ್ನು ಕೆಳಗಿಳಿಸಿ ಕಾಂತರಾಜು ವರದಿ ಮೂಲೆಗುಂಪು ಮಾಡುವ ಪ್ರಯತ್ನ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುತ್ತಿದೆ. ಇದಕ್ಕೆಲ್ಲ ಡಿ.ಕೆ ಶಿವಕುಮಾರ ಅವರೇ ಕಾರಣ ಎಂದು ಆರೋಪಿಸಿದರು.
ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಕಾಂತರಾಜು ವರದಿ ಜಾರಿಯಾಗುತ್ತದೆ ಎನ್ನುವ ವಿಶ್ವಾಸ ನಮಗಿಲ್ಲ. ಶೋಷಿತರಿಗೆ, ದಲಿತರಿಗೆ, ಹಿಂದುಳಿದವರಿಗೆ ಮೇಲೆತ್ತುವ ಕಾರ್ಯ ಮಾಡುತ್ತಾರೆ ಎನ್ನುವ ಭರವಸೆಯಿಂದಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ದಲಿತರು ಮತ ಹಾಕಿದ್ದಾರೆ. 16 ಬಾರಿ ಬಜೆಟ್ ಮಂಡನೆ ಮಾಡಿ, ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಸೂತ್ರ ಅಳವಡಿಸಿಕೊಂಡಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದ ತುಂಬಾ ದಂಗೆಗಳಾಗುತ್ತವೆ. ಪ್ರತಿಭಟನೆಗಳು ನಡೆಯುತ್ತವೆ ಎಂದು ಎಚ್ಚರಿಸಿದರು.
ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಅನೀಲಕುಮಾರ್ ಬೆಲ್ದಾರ್ ಮಾತನಾಡಿ, ಇಂದು ರಾಜ್ಯದಲ್ಲಿ ಮನುವಾದಿಗಳ ಮತ್ತು ಸಂವಿಧಾನದ ಮಧ್ಯೆ ಸಂಘರ್ಷ ನಡೆಯುತ್ತಿದೆ. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದು ಅವರ ನೇತೃತ್ವವನ್ನು ಒಪ್ಪಿ ಜನ ಮತ ಹಾಕಿದ್ದಾರೆ. ಈಗ ಷಡ್ಯಂತ್ರದಿಂದ ಅವರನ್ನು ಕೆಳಗಿಳಿಸಿ ಅರಾಜಕತೆ, ಅಶಾಂತಿ ಮೂಡಿಸುವ ಹುನ್ನಾರ ನಡೆಯುತ್ತಿದೆ. ಒಂದು ವೇಳೆ ಸಿಎಂ ಬದಲಾವಣೆಯಾದರೆ ನಂತರ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಕಾಂಗ್ರೇಸ್ ಹೈಕಮಾಂಡ ಸದ್ಯ ನಡೆಯುತ್ತಿರುವ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ರಮೇಶ ಡಾಕುಳಗಿ ಮಾತನಾಡಿ, 2028ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಸಿದ್ದರಾಮಯ್ಯ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ಬಿಹಾರದಲ್ಲಿ ಕಾಂಗ್ರೆಸ್ ಆದ ಗತಿಯೇ ರಾಜ್ಯದಲ್ಲೂ ಆಗುತ್ತದೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಾ.ರಾಜಶೇಖರ ಸೇಡಂಕರ, ಉಭಯ ಒಕ್ಕೂಟದ ಮುಖಂಡ ತಾನಾಜಿ ಸಗರ, ತುಕಾರಾಮ ಚಿಮಕೊಡೆ, ಸುಭಾಷ ಹಮಿಲಪುರೆ, ಶೈಲೇಂದ್ರ ಹಿಬಾರೆ, ಶಾಂತಕುಮಾರ್, ರಾಜಕುಮಾರ್, ಪುಂಡಲಿಕರಾವ ಹಾಗೂ ಪ್ರದೀಪ ನಾಟೆಕಾರ್ ಮತ್ತಿತರರು ಉಪಸ್ಥಿತರಿದ್ದರು.







