ಬೀದರ್ | ವಿಸ್ಡಮ್ ಕಾಲೇಜಿನಲ್ಲಿ ನೀಟ್ ರಿಪೀಟರ್‌ಗಳಿಗೆ 1 ಕೋಟಿ ರೂ. ವಿದ್ಯಾರ್ಥಿ ವೇತನದೊಂದಿಗೆ ಕೋಚಿಂಗ್ : ಮುಹಮ್ಮದ್ ಆಸಿಫುದ್ದೀನ್

ಬೀದರ್: ನಗರದ ವಿಸ್ಡಮ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ನೀಟ್ ರಿಪೀಟರ್ ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವಿದ್ಯಾರ್ಥಿ ವೇತನದೊಂದಿಗೆ ಕೋಚಿಂಗ್ ನೀಡಲಾಗುತ್ತಿದೆ ಎಂದು ಕಾಲೇಜಿನ ಚೇರ್ಮನ್ ಮುಹಮ್ಮದ್ ಆಸಿಫುದ್ದೀನ್ ತಿಳಿಸಿದ್ದಾರೆ.
ಸೋಮವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2025ನೇ ಸಾಲಿನಲ್ಲಿ ನಮ್ಮ ಕಾಲೇಜು ಶೇ.50 ರಷ್ಟು ಫಲಿತಾಂಶ ಸಾಧಿಸಿದೆ. 30 ವಿದ್ಯಾರ್ಥಿಗಳಲ್ಲಿ 15 ಮಂದಿ ಸರ್ಕಾರದ ಉಚಿತ ವೈದ್ಯಕೀಯ ಸೀಟ್ ಪಡೆದಿದ್ದಾರೆ. ಇವರಲ್ಲಿ ಐವರು ಬೀದರ್‌ನ ಬ್ರಿಮ್ಸ್‌ನಲ್ಲಿ ಹಾಗೂ ಇತರ ಹತ್ತು ಮಂದಿ ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದರು.
ಈ ಬಾರಿ ವಿಶೇಷವಾಗಿ ನೀಟ್ ರಿಪೀಟರ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು 1 ಕೋಟಿ ರೂ. ವಿದ್ಯಾರ್ಥಿ ವೇತನ ಯೋಜನೆ ರೂಪಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಈಗಾಗಲೇ ಸೇರಿಕೊಂಡಿದ್ದು, ತರಗತಿಗಳು ಪ್ರಾರಂಭವಾಗಿವೆ ಎಂದು ತಿಳಿಸಿದರು.
ನೀಟ್ ಪರೀಕ್ಷೆಯಲ್ಲಿ 400 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಶೇ.90 ರಿಯಾಯಿತಿಯಿಂದ ಹಿಡಿದು 199 ಕ್ಕಿಂತ ಕಡಿಮೆ ಅಂಕ ಪಡೆದವರಿಗೆ ಶೇ.15 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ, ತಿಂಡಿ ಹಾಗೂ ಒಂದು ಹೊತ್ತಿನ ಊಟ ವ್ಯವಸ್ಥೆ ಇರಲಿದೆ. ಹೊರ ಜಿಲ್ಲೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ವೈದ್ಯರಾಗುವ ಕನಸು ಕಾಣುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಆಸಿಫುದ್ದೀನ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುಹಮ್ಮದ್ ಸಲಾವುದ್ದೀನ್ ಫರ್ಹಾನ್ ಹಾಗೂ ಪ್ರಾಧ್ಯಾಪಕಿ ಪ್ರಿಯಂಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.







