Bidar | ಕೆ.ವಿ.ನಾರಾಯಣ ಅವರ ಅಗಲಿಕೆಯಿಂದ ಕನ್ನಡ ಸಾಂಸ್ಕೃತಿಕ ಲೋಕದ ದನಿಯೊಂದು ಮೌನವಾಗಿದೆ: ಡಾ.ಭೀಮಾಶಂಕರ್ ಬಿರಾದಾರ್

ಬೀದರ್: ಹಿರಿಯ ವಿಮರ್ಶಕ, ಭಾಷಾ ತಜ್ಞ ಹಾಗೂಸಂಸ್ಕೃತಿ ಚಿಂತಕ ಪ್ರೊ. ಕೆ.ವಿ. ನಾರಾಯಣ ಅವರು ತಮ್ಮ ಬರಹ ಮತ್ತು ಆಲೋಚನೆಗಳ ಮೂಲಕ ಕನ್ನಡದ ಬೌದ್ಧಿಕ ಲೋಕಕ್ಕೆ ಹೊಸ ದಿಕ್ಕು ತೋರಿಸಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಸಾಂಸ್ಕೃತಿಕ ಲೋಕದ ದನಿಯೊಂದು ಮೌನವಾದಂತಾಗಿದೆ ಎಂದು ಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಭೀಮಾಶಂಕರ್ ಬಿರಾದಾರ್ ಹೇಳಿದರು.
ನಗರದ ಬಸವೇಶ್ವರ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹಾಗೂ ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜುಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡದ ಹಿರಿಯ ಚಿಂತಕ ಪ್ರೊ.ಕೆ.ವಿ.ನಾರಾಯಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆವಿಎನ್ ಅವರು ಹಲವು ಒಳನೋಟಗಳ ಮೂಲಕ ಕನ್ನಡದ ಜ್ಞಾನ ಪರಂಪರೆಯನ್ನು ಕಟ್ಟಿಕೊಟ್ಟ ವಿದ್ವಾಂಸರಾಗಿದ್ದಾರೆ. ಭಾಷೆಯ ಮೂಲಕ ಬದುಕು, ಸಂಸ್ಕೃತಿ ಹಾಗೂ ಲೋಕವನ್ನು ನಿರ್ವಚಿಸಿದ ಅವರು ಕನ್ನಡ ಸಾಹಿತ್ಯದ ಬೇರು, ಕಾಂಡ ಮತ್ತು ಚಿಗುರುಗಳ ಕುರಿತು ಹಲವು ಸಂಕಥನಗಳನ್ನು ನಡೆಸಿದ್ದಾರೆ ಎಂದು ತಿಳಿಸಿದರು.
ಕುಪ್ಪಳಿ ವಿಚಾರ ಕಮ್ಮಟದಲ್ಲಿ ಹಿರಿಯರು ಮತ್ತು ಕಿರಿಯರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಅವರ ಅರಿವಿನ ದಾರಿ ಅನನ್ಯವಾಗಿತ್ತು. ಯಾವುದೇ ಹಮ್ಮುಬಿಮ್ಮುಗಳಿಲ್ಲದ ಸರಳ ವ್ಯಕ್ತಿತ್ವದ ಶ್ರೇಷ್ಠ ಚೇತನವಾಗಿದ್ದ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ಶೂನ್ಯ ಆವರಿಸಿದೆ ಎಂದು ಕೆವಿಎನ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
ಪ್ರಾಚಾರ್ಯ ಡಾ. ರುದ್ರಮಣಿ ಮಠಪತಿ ಮಾತನಾಡಿ, ತಮ್ಮ ವಿದ್ವತ್ಪೂರ್ಣ ಲೇಖನಗಳು ಹಾಗೂ ಹೊಸ ದೃಷ್ಟಿಕೋನದ ಮೂಲಕ ಕನ್ನಡ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಕೊಡುಗೆ ನೀಡಿದ ಚೇತನ ಕೆ.ವಿ. ನಾರಾಯಣ ಅವರಾಗಿದ್ದಾರೆ. ಬರಹ ಮತ್ತು ಭಾಷಾವಿಜ್ಞಾನದ ಮೂಲಕ ನಾಡಿನ ಸಾಹಿತ್ಯ ಜಗತ್ತಿನ ಹಿರಿಮೆ ಹೆಚ್ಚಿಸಿದ ಶ್ರೇಷ್ಠ ಭಾಷಾವಿಜ್ಞಾನಿಯಾಗಿದ್ದ ಅವರ ಅಗಲಿಕೆ ಸಾಹಿತ್ಯ ಲೋಕದಲ್ಲಿ ಅನಾಥ ಪ್ರಜ್ಞೆ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯೆ ಮಾಯಾ ಮುರಾಳೆ, ಬಸವೇಶ್ವರ ಸ್ನಾತಕೋತ್ತರ ಕಾಲೇಜಿನ ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ್, ನಿವೃತ್ತ ಶಿಕ್ಷಕಿ ಲಕ್ಷ್ಮೀಬಾಯಿ ಪಾಟೀಲ್, ಕನ್ಯಾಕುಮಾರಿ ಯನಗುಂದೆ, ಪ್ರಭುಲಿಂಗ್ ಕಲೋಜಿ, ಡಾ. ಬಸವರಾಜ ಖಂಡಾಳೆ, ಶ್ರೀನಿವಾಸ್ ಉಮಾಪುರೆ, ರೋಷನ್ ಬಿ., ವಿವೇಕಾನಂದ್ ಶಿಂಧೆ, ನಾಗರಾಜ್ ನಾಸೆ, ಪ್ರವೀಣ್ ಬಿರಾದಾರ್, ಎಂ.ಡಿ. ಇರ್ಫಾನ್, ಡಾ. ಭುವನೇಶ್ವರಿ ಶ್ರೀವಾತ್ಸವ್, ಸೌಮ್ಯಾ ಜೋಶಿ, ಪೂಜಾ ಗಂಗು, ಸಂಗೀತಾ ಮಹಾಗಾವೆ, ಜಗದೇವಿ ಜವಳಗೆ, ಚೆನ್ನಬಸಪ್ಪ ಗೌರ್, ಪ್ರಿಯಾ ಚೌಹಾನ್, ನಾಗವೇಣಿ ಬಿರಾದಾರ್, ಶೀತಲ್ ರೆಡ್ಡಿ, ಸಚಿನ್ ಬಿಡುವೆ, ದಶರಥ್ ಹಾಗೂ ಯೋಗೇಶ್ ಕ್ಷೀರಸಾಗರ ಸೇರಿದಂತೆ ಇತರರು ಉಪಸ್ಥಿತರಿದ್ದರು.






