ಬೀದರ್ | ತೋಳ ದಾಳಿ : ಬಾಲಕ ಸೇರಿ ನಾಲ್ವರಿಗೆ ಗಾಯ

ಸಾಂದರ್ಭಿಕ ಚಿತ್ರ | PC : NDTV
ಬೀದರ್ : ಔರಾದ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತೋಳವೊಂದು ಒಂದೇ ದಿನ ನಾಲ್ಕು ಜನರ ಮೇಲೆ ತೋಳ ದಾಳಿ ನಡೆಸಿ ಆತಂಕ ಸೃಷ್ಠಿಸಿದೆ. ಈ ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಹೋಲದಲ್ಲಿ ಕೆಲಸ ಮಾಡುತ್ತಿದ್ದ ಆಲೂರ್ (ಬಿ) ಗ್ರಾಮದ ರುಕ್ಮಿಣಬಾಯಿ ಮೇತ್ರೆ ಹಾಗೂ ಜೋಜನಾ ಗ್ರಾಮದ ಲಾಲಮ್ಮ ಕಾಂಬ್ಳೆ ಅವರ ಮೇಲೆ ತೋಳ ಹಿಂಬದಿಯಿಂದ ದಾಳಿ ನಡೆಸಿ ತಲೆ, ಕಿವಿ, ಬೆನ್ನು ಹಾಗೂ ಸೋಂಟ ಭಾಗಕ್ಕೆ ಗಾಯಮಾಡಿದೆ.
ಜೀರ್ಗಾ (ಬಿ) ಗ್ರಾಮದ ಮಂಗಲಾ ಸ್ವಾಮಿ ಅವರು ಹೋಲದಿಂದ ಮನೆಗೆ ವಾಪಸ್ಸಾಗುತ್ತಿದ್ದಾಗ ತೋಳದ ದಾಳಿಗೆ ಒಳಗಾಗಿದ್ದಾರೆ. ಅವರ ಕೂಗನ್ನು ಕೇಳಿ ಪತಿ ಶರಣಯ್ಯ ಸ್ವಾಮಿ ಓಡಿ ಬಂದು ತೋಳವನ್ನು ಓಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಅದೇ ಗ್ರಾಮದ 15 ವರ್ಷದ ಬಾಲಕನ ಮೇಲೂ ತೋಳ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಗೊಂಡ ನಾಲ್ವರನ್ನು ಬೀದರ್ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಆಲೂರ್ (ಬಿ) ಗ್ರಾಮದ ರುಕ್ಮಿಣಬಾಯಿ ಮೇತ್ರೆ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೋಳ ಹುಚ್ಚಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಎಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಮನವಿ ಮಾಡಿದೆ.
ಜನರು ಒಬ್ಬರೇ ತೆರಳದೆ ಗುಂಪಾಗಿ ಓಡಾಡಬೇಕು. ತೋಳವನ್ನು ಸೆರೆಹಿಡಿಯಲು ವಿಶೇಷ ತಂಡವನ್ನು ಕರೆದೊಯ್ಯಲು ಕ್ರಮ ಕೈಗೊಂಡಿದ್ದೇವೆ. ಇಂದು ರಾತ್ರಿ ಸಿಬ್ಬಂದಿಗಳು ಗಸ್ತು ತಿರುಗಲಿದ್ದಾರೆ ಎಂದು ಔರಾದ್ ವಲಯ ಅರಣ್ಯ ಅಧಿಕಾರಿ ಎಂ. ಡಿ. ಮುದಾಸ್ಸಿರ್ ಅಹಮ್ಮದ್ ತಿಳಿಸಿದ್ದಾರೆ.







