ಬೀದರ್ | ಮಹಿಳೆಯರು ಆಸ್ತಿ ಹಕ್ಕು ಪಡೆದು ಸಮಾನತೆಯಿಂದ ಬದುಕುವಂತಾಗಬೇಕು : ಡಾ.ನಾಗಲಕ್ಷ್ಮಿ ಚೌಧರಿ

ಬೀದರ್ : ಮಹಿಳೆಯರು ಆಸ್ತಿ ಹಕ್ಕು ಪಡೆದು ಸಮಾನತೆಯಿಂದ ಬದುಕುವಂತಾಗಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಹೇಳಿದರು.
ಇಂದು ನಗರದ ಬಸವಗಿರಿಯಲ್ಲಿ ವಚನ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಕಮಹಾದೇವಿ ಅವರು ನಮಗೆ ಬರೀ ವಚನಗಳು ಹೇಳಿ ಕೊಟ್ಟಿಲ್ಲ. ಈ ಬದುಕನ್ನು ಯಾವ ರೀತಿ ಎದುರಿಸಬೇಕು, ಒಬ್ಬ ತಾಯಿ ನಿಂತರೆ ಇಡೀ ಜಗತ್ತೇ ಆಳಬಲ್ಲಳು ಎಂದು ಹೇಳಿ ಕೊಟ್ಟಿದ್ದಾರೆ. ಇಡೀ ಪ್ರಪಂಚದಲ್ಲೆ ಮೊದಲ ಮಹಿಳಾ ಪ್ರತಿಭಾವಕಿ ಯಾರಾದರೂ ಇದ್ದರೆ ಅದು ಅಕ್ಕಮಹಾದೇವಿಯಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಗಂಡಸರು ಮನೆಯಲ್ಲಿ ಏನೇನೂ ಮಾಡುತ್ತಾರೋ ಅದು ಹೆಣ್ಣು ಮಾಡುವುದಿಲ್ಲ. ಮನೆಯಿಂದಲೇ ಅವಳಿಗೆ ಅಸಮಾನತೆ ಪ್ರಾರಂಭವಾಗುತ್ತದೆ. ಇಂದಿನ ಹೆಣ್ಣುಮಕ್ಕಳಿಗೆ ಪ್ರತಿ ಹಂತದಲ್ಲೂ ಕಡಿವಾಣ ಹಾಕಲಾಗಿದೆ. ನನಗೆ ಸಂಪೂರ್ಣವಾಗಿ ನನ್ನ ತಂದೆ ಸ್ವತಂತ್ರ ಕೊಟ್ಟಿದ್ದಕ್ಕಾಗಿ ನಾನು ಪ್ರೀತಿಸಿ ಮದುವೆಯಾದೆ. ನಾನು ಬಸವತತ್ವದ ಅಡಿಯಲ್ಲಿ ನಡೆಯುವ ನಿಜವಾದ ಮಹಿಳೆಯಾಗಿದ್ದೇನೆ. ನೀವು ಕೂಡ ಸ್ವತಂತ್ರವಾಗಿ ಆಲೋಚಿಸಿ ಬದುಕಬೇಕು. ಬಸವ ತತ್ವ ಕೇಳುವುದರಿಂದ ಸಮಾಜ ಬದಲಾಗಲ್ಲ. ಆ ತತ್ವ ಆಚರಣೆ ಮಾಡುವುದರಿಂದ ಸಮಾಜ ಬದಲಾವಣೆ ಮಾಡಲು ಸಾಧ್ಯ. ಬಸವಣ್ಣ ಬರೀ ಮೂರ್ತಿಯಾಗಿ, ಒಂದು ಫೋಟೋದಲ್ಲಿ ಇಡುವುದಕ್ಕಲ್ಲ. ಅವರ ತತ್ವಗಳು ಪಾಲನೆ ಮಾಡಿದಾಗ ಮಾತ್ರ ನಾವು ಅವರಿಗೆ ಗೌರವ ನೀಡಿದ ಹಾಗೆ ಆಗುತ್ತದೆ ಎಂದು ತಿಳುವಳಿಕೆ ನೀಡಿದರು.
ಇಂದಿನ ಸಮಾಜದಲ್ಲಿ ಹೆಣ್ಣನ್ನು ಮರಕ್ಕೆ ಕಟ್ಟಿ ಹೊಡೆಯುತ್ತಾರೆ. ಅವಳನ್ನು ಬೆತ್ತಲೆ ಮಾಡಲಾಗುತ್ತಿದೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ. ನಾವು ಮಹಿಳಾ ಸಮಾನತೆ ಎಂದು ಹೋರಾಟ ಮಾಡುತಿದ್ದೇವೆ. ಆದರೆ ಆ ಸಮಾನತೆ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಬಾಲ್ಯ ವಿವಾಹ ಪದ್ಧತಿ ಇನ್ನು ಜಾರಿಯಲ್ಲಿದೆ. ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿದ್ದಾವೆ. ಇದಕ್ಕೆ ನಾವು ಕಡಿವಾಣ ಹಾಕಬೇಕಿದೆ ಎಂದರು.
ಬಸವಣ್ಣನವರು ಚಿಕ್ಕ ವಯಸ್ಸಲ್ಲೆ ನಮ್ಮ ಅಕ್ಕಳಿಗೆ ಜನಿವಾರ ಯಾಕೆ ಹಾಕುವುದಿಲ್ಲ ಎಂದು ತಮ್ಮ ತಂದೆಗೆ ಪ್ರಶ್ನೆ ಮಾಡಿದ್ದರು. ಅವರು ಅಂಥ ಅಸಮಾನತೆ ಇರುವ ಸಂಸ್ಕಾರಕ್ಕೆ ಧಿಕ್ಕಾರ ಎಂದು ಹೇಳಿ ಮನೆ ಬಿಟ್ಟು ಹೋರಡುತ್ತಾರೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ತನ್ನ ಅಕ್ಕನನ್ನು ಅದೆಷ್ಟು ಸಮಾನತೆಯಿಂದ ಕಾಣುತಿದ್ದರು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.
ಮನೆಯಲ್ಲಿ ತಾಯಂದಿರು ಗಂಡು ಮಕ್ಕಳಿಗೆ ಪಾಠ ಮಾಡಬೇಕಾಗಿದೆ. ಮಹಿಳೆಯರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ದಿನಾಲು ಅವರ ಗಂಡ ಹೊಡೆಯುತ್ತಾನೆ. ಇದರಿಂದಾಗಿ ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಕರಾಟೆ ಕಲಿಸಬೇಕಿದೆ. ಹೆಣ್ಣುಮಕ್ಕಳು ಸಮಾನತೆಯಿಂದ ದೂರ ಇದ್ದೇವೆ. ಮಹಿಳೆಗೆ ಸಮಾನವಾದ ಆರ್ಥಿಕ ಸಮಾನತೆ ಇಲ್ಲ. ಮುಂದಿನ ದಿನಗಳಲ್ಲಿ ಈ ದೇಶ ಹೆಣ್ಣುಮಗಳೋಬ್ಬಳು ನಡೆಸುವಂತಾಗಲಿ ಎಂದು ತಿಳಿಸಿದರು.
ಟಿ.ರಶ್ಮಿ ಮಾತನಾಡಿ, ಹೆಣ್ಣುಮಗು ಗಂಡುಮಗು ಯಾವುದೇ ಇರಲಿ ಮಕ್ಕಳಂತೆಯೇ ಬೆಳೆಸಬೇಕು. ಇದು ಪಿತೃ ಪ್ರಧಾನವಿಲ್ಲ, ಪುರುಷ ಪ್ರಧಾನವಾಗಿದೆ. ಯಾವ ರಾಜ್ಯದಲ್ಲಿ ಹೆಚ್ಚು ಪೊಲೀಸ್ ಠಾಣೆಗಳು ಇದ್ದಾವೋ ಅದು ಕಲ್ಯಾಣ ರಾಜ್ಯವಾಗಲು ಸಾಧ್ಯವಿಲ್ಲ. ಕಲ್ಯಾಣ ಎನ್ನುವ ಪರಿಕಲ್ಪನೆ ಸುಧಾರಣಾ ವಾದವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಗಂಗಾಂಬಿಕಾ ಅಕ್ಕ, ಅತ್ತಿವೇರಿಯ ಬಸವೇಶ್ವರಿ ಮಾತಾ, ಡಾ.ಗೀತಾ ಈಶ್ವರ್ ಖಂಡ್ರೆ, ಜಯಶ್ರೀ ದಂಡೆ, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಹಂಗರಗಿ, ಸರುಬಾಯಿ ಘುಳೆ, ಶಕುಂತಲಾ ಬೆಲ್ದಾಳೆ, ರಂಜನಾ ಪಾಟೀಲ್, ಅನುಪಮಾ ಎರೋಳಕರ್, ಶೈನಿ ಪ್ರದೀಪ್ ಗುಂಟಿ, ಉಮಾ ದೇಶಮುಖ ಹಾಗೂ ಲೀಲಾವತಿ ಚಕೋತೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.







