ಬೀದರ್ | ವೇತನಕ್ಕಾಗಿ ಆಗ್ರಹಿಸಿ ಗ್ರಾಮ ಪಂಚಾಯತ್ ಸ್ವಚ್ಚತಾ ವಾಹನಿ ಮಹಿಳಾ ಸಿಬ್ಬಂದಿಗಳಿಂದ ಧರಣಿ

ಬೀದರ್ : ವೇತನ ನೀಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಸ್ವಚ್ಚತಾ ವಾಹನಿ ಮಹಿಳಾ ಸಿಬ್ಬಂದಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಇಂದು ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ ಸ್ವಚ್ಚತಾ ವಾಹನಿ ಮಹಿಳಾ ಸಿಬ್ಬಂದಿಗಳು, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಅಧಿಕಾರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಧರಣಿಯಲ್ಲಿ 100ಕ್ಕೂ ಅಧಿಕ ಮಹಿಳಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಪ್ರತಿ ತಿಂಗಳು ಚಾಲಕರಿಗೆ 5 ಸಾವಿರ ರೂ., ಸಿಬ್ಬಂದಿಗೆ 3 ಸಾವಿರ ರೂ. ನೀಡುತ್ತೇವೆ ಎಂದು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಆದರೆ 3 ವರ್ಷಗಳಿಂದ ಚಾಲಕ ಹಾಗೂ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ವೇತನ ನೀಡಿಲಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
ಜಿಲ್ಲಾದ್ಯಂತ 300ಕ್ಕೂ ಅಧಿಕ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಯಾವುದೇ ವೇತನ ನೀಡದೇ ಪಿಡಿಓಗಳು ಉಡಾಫೆಯಾಗಿ ಮಾತಾಡುತ್ತಿದ್ದಾರೆ. ಹಲವು ಬಾರಿ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದ್ದರೂ, ಕೂಡ ವೇತನ ನೀಡಲಿಲ್ಲ. ಕೆಲಸಕ್ಕೆ ತಕ್ಕ ಕೂಲಿ ಸಿಗುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಸಿಬ್ಬಂದಿಗಳು ಎಚ್ಚರಿಕೆ ನೀಡಿದ್ದಾರೆ.





