ಬೀದರ್ | ಜಿಲ್ಲಾಡಳಿತ ಸೇರಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಯೋಗ ದಿನಾಚರಣೆ

ಬೀದರ್ : ನಮ್ಮ ದೇಶದ ಋಷಿಮುನಿಗಳು ಆಚರಿಸಿಕೊಂಡು ಬಂದ ಯೋಗವನ್ನು ಇಂದು ಇಡೀ ವಿಶ್ವವೇ ಒಪ್ಪಿಕೊಂಡು ಆಚರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ನಗರದ ಕೋಟೆ ಆವರಣದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಕ್ರೀಡಾ ಇಲಾಖೆ, ಮೇರಾ ಯುವ ಭಾರತ ಹಾಗೂ ಇನ್ನಿತರ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ "ಆರೋಗ್ಯಕರ ವೃದ್ಧ್ಯಾಪಕ್ಕಾಗಿ ಯೋಗ" ಎಂಬ ಧೇಯವಾಕ್ಯದೊಂದಿಗೆ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಯೋಗ ಕೇವಲ ನಮ್ಮ ದೇಶಕ್ಕೆ ಸೀಮಿತವಾಗಿತ್ತು. ಆದರೆ, ಇಂದು ಭಾರತವು ಇಡೀ ವಿಶ್ವಕ್ಕೇ ಯೋಗವನ್ನು ಪರಿಚಯಿಸಿ ವಿಶ್ವಾದ್ಯಂತ ಖ್ಯಾತಿ ಪಡೆದಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಪ್ರತಿಯೊಬ್ಬರೂ ಮೊಬೈಲ್ ಹಾಗೂ ಇಂಟರ್ನೆಟ್‌ನಲ್ಲಿ ತಲ್ಲೀನರಾಗುತ್ತಿದ್ದಾರೆ. ಆದರೆ, ದಿನವಿಡೀ ಚುರುಕಾಗಿರಲು, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಏಕಾಗ್ರತೆ ಸಾಧಿಸಲು ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ಯೋಗ ಹಾಗೂ ಧ್ಯಾನ ಮಾಡುವುದು ಅತ್ಯಗತ್ಯ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ದಿನನಿತ್ಯ ಅರ್ಧ ಗಂಟೆಯೂ ಯೋಗ ಮಾಡಿದ್ದಲ್ಲಿ ದೈನಂದಿನ ಕರ್ತವ್ಯದಲ್ಲಿ ಲವಲವಿಕೆ ಮತ್ತು ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವುದು. ಯೋಗ ಪುರಾತನ ಕಾಲದಿಂದಲೂ ಪರಿಚಯದಲ್ಲಿತ್ತು. ಆದರೆ, ಹೆಚ್ಚು ಪ್ರಚಾರದಲ್ಲಿ ಇರಲಿಲ್ಲ. ಸಾರ್ವಜನಿಕರು ಯೋಗಕ್ಕೆ ಮಹತ್ವ ನೀಡಿ, ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಡಾ. ಖುತೇಜಾ ಬೇಗಂ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.






