Bidar | ಯುವಕರು ದುಶ್ಚಟಗಳಿಂದ ದೂರವಿದ್ದು ಹೊಸ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲಿ: ಡಾ.ರಮೇಶ್ ಕೆ.ಬಿ.
‘ನಶಾ ಮುಕ್ತ ಭಾರತ’ ಅಭಿಯಾನದ ಸೈಕಲ್ ಜಾಥಾಕ್ಕೆ ಚಾಲನೆ

ಬೀದರ್: ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹುದೊಡ್ಡದು. ಯುವಶಕ್ತಿ ಕೆಟ್ಟ ಹವ್ಯಾಸಗಳಿಗೆ ಆಕರ್ಷಿತವಾಗದೆ, ವಿನೂತನ ಸಂಶೋಧನೆ ಹಾಗೂ ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಎಸ್‌ಎಸ್‌ಕೆ ಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ರಮೇಶ್ ಕೆ.ಬಿ. ಹೇಳಿದರು.
ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ್ ವತಿಯಿಂದ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜು ಹಾಗೂ ಎಸ್‌ಎಸ್‌ಕೆ ಬಸವೇಶ್ವರ ಪದವಿ ಕಾಲೇಜಿನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ನಶಾ ಮುಕ್ತ ಭಾರತ’ ಅಭಿಯಾನದ ಸೈಕಲ್ ಜಾಥಾಕ್ಕೆ ಬಸವೇಶ್ವರ ಪದವಿ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಶಕ್ತಿ ದೇಶದ ಬಹುದೊಡ್ಡ ಸಂಪತ್ತಾಗಿದೆ. ಯುವಕರ ಕ್ರಿಯಾಶೀಲತೆಯ ನೆಲೆಗಟ್ಟಿನ ಮೇಲೆ ಸಮಾಜದ ಆರ್ಥಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆ ನಿಂತಿದೆ. ದುಶ್ಚಟಗಳಿಂದ ಯುವ ಸಂಪತ್ತು ನಾಶವಾಗಬಾರದು. ಯುವಕರು ಆರೋಗ್ಯವಾಗಿದ್ದರೆ ಇಡೀ ನಾಡು ಸಮೃದ್ಧವಾಗಿ ಬೆಳೆಯುತ್ತದೆ. ದೇಶದ ಏಳಿಗೆಗಾಗಿ ಯುವ ಸಮುದಾಯ ಶ್ರಮಿಸಬೇಕು ಎಂದು ಹೇಳಿದರು.
ಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಭೀಮಾಶಂಕರ್ ಬಿರಾದಾರ್ ಮಾತನಾಡಿ, ಹೊಸ ಚೈತನ್ಯದೊಂದಿಗೆ ಹೊಸ ಲೋಕವನ್ನು ಕಟ್ಟಬೇಕಾದ ಯುವ ಸಮುದಾಯ ದುಶ್ಚಟಗಳ ದಾಸ್ಯಕ್ಕೆ ಒಳಗಾಗಬಾರದು. ಸೃಜನಶೀಲತೆ, ಸಂಶೋಧನೆ, ರಂಗಭೂಮಿ, ಕೃಷಿ, ವ್ಯವಹಾರ ಹಾಗೂ ಕ್ರೀಡೆ ಸೇರಿದಂತೆ ಹಲವು ಹೊಸ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಬದುಕಿಗೆ ಅರ್ಥ ಕಂಡುಕೊಳ್ಳಬೇಕು. ತಮ್ಮ ಜ್ಞಾನ ಮತ್ತು ಪ್ರತಿಭೆಯ ಮೂಲಕ ಅಸ್ಮಿತೆ ರೂಪಿಸಿಕೊಳ್ಳುವ ಹೊಣೆಗಾರಿಕೆ ಯುವ ಸಮುದಾಯದ ಮೇಲಿದೆ ಎಂದು ತಿಳಿಸಿದರು.
ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ್ ಬೀದರ್ ಶಾಖೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಸೋಮನಾಥ ಪೂಜಾರಿ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು ಹೊಸ ಭಾರತ ನಿರ್ಮಾಣಕ್ಕೆ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಕಸಿತ ಭಾರತಕ್ಕಾಗಿ ಸೈಕಲ್ ಜಾಥಾವನ್ನು ಶ್ರೀ ಬಸವೇಶ್ವರ ಪದವಿ ಕಾಲೇಜಿನಿಂದ ತ್ರಿಪುರಾಂತದಲ್ಲಿರುವ ಎಸ್‌ಎಸ್‌ಕೆ ಬಸವೇಶ್ವರ ಪದವಿ ಕಾಲೇಜಿನವರೆಗೆ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಯುವ ಸಮುದಾಯಕ್ಕೆ ದುಶ್ಚಟಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಡಿಪಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಕುರಕೋಟೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಡಿಪಿಸಿ ಉಪಾಧ್ಯಕ್ಷ ವೀರಣ್ಣ ಹಲಶೆಟ್ಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹಕಾರ್ಯದರ್ಶಿ ಬಸವರಾಜ ಬಾಲಕಿಲೆ, ನಿರ್ದೇಶಕರಾದ ಬಸವರಾಜ ತೊಂಡಾರೆ, ಎಸ್‌ಎಸ್‌ಕೆಬಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಡಾ. ಸುರೇಶ ಎಚ್.ಆರ್., ಪ್ರೊ. ವಿಠೋಬಾ ಡೊಣ್ಣೆಗೌಡರ್, ಮಹಾದೇವ ದೇಗಾಂವ್, ಮಾಯಾ ಮುರಾಳೆ, ಡಾ. ಶಾಂತಲಾ ಪಾಟೀಲ್, ಡಾ. ರುದ್ರಮಣಿ ಮಠಪತಿ, ಪವನ್ ಪಾಟೀಲ್, ಅಶೋಕ್ ಸ್ವಾಮಿ, ಶರಣಪ್ಪ ದುರ್ಗೆ, ಶ್ರೀನಿವಾಸ್ ಉಮಾಪುರೆ, ಬಸವರಾಜ್ ಖಂಡಾಳೆ, ವಿವೇಕಾನಂದ್ ಶಿಂಧೆ, ಪ್ರಭಾಕರ್ ನೌಗಿರೆ, ಶೀತಲ್ ರೆಡ್ಡಿ, ಪ್ರಿಯಾ ಚೌಹಾನ್, ನಾಗವೇಣಿ ಬಿರಾದಾರ್, ಸೌಮ್ಯಾ ಜೋಶಿ, ಸುಮಾ, ಐಶ್ವರ್ಯ ಖರೋಣೆ, ಸುಜಾವುದ್ದಿನ್, ಗಾಯತ್ರಿ ಧನಮಲ್ಲೆ, ನಾಗರಾಜ್ ನಾಸೆ ಹಾಗೂ ಶ್ರೀಕೃಷ್ಣಾ ಪೂಜಾರಿ ಉಪಸ್ಥಿತರಿದ್ದರು. ಗಂಗಾಧರ್ ಸಾಲಿಮಠ್ ಸ್ವಾಗತಿಸಿದರು.






