Bidar | ಮಹಿಳೆಗೆ ಚುಡಾಯಿಸಿದ ಶಂಕೆ : ಯುವಕನ ಬರ್ಬರ ಹತ್ಯೆ

ಸಾಂದರ್ಭಿಕ ಚಿತ್ರ | Photo Credit : freepik.com
ಬೀದರ್: ಮಹಿಳೆಯರಿಗೆ ಚುಡಾಯಿಸುತ್ತಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೀದರ್ ತಾಲೂಕಿನ ಎಸ್.ಎಂ.ಕೃಷ್ಣ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕಿರಣಕುಮಾರ್ (26) ಕೊಲೆಯಾದ ಯುವಕ. ಎಂ.ಡಿ. ಜುನೈದ್, ಎಂ.ಡಿ. ಖಾಜಾ, ಅಸ್ಪಾಕ್ ಹಾಗೂ ಮೇರಜಾ ಬೇಗಂ ವಿರುದ್ಧ ಹತ್ಯೆ ಆರೋಪ ಕೇಳಿಬಂದಿದೆ.
ಈ ಕುರಿತು ಮೃತನ ತಾಯಿ ನೀಡಿದ ದೂರಿನ ಪ್ರಕಾರ, ಕಿರಣಕುಮಾರ್ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮೂರು ದಿನಗಳ ಹಿಂದೆ ಆರೋಪಿಗಳಾದ ಜುನೈದ್ ಮತ್ತು ಖಾಜಾ ಅವರು ಮನೆಗೆ ಬಂದು, ತಮ್ಮ ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಿದ್ದೀಯೆಂದು ಆರೋಪಿಸಿ ಜಗಳ ಮಾಡಿದ್ದರು ಎನ್ನಲಾಗಿದೆ.
ಮಂಗಳವಾರ ಸಂಜೆ ಆರೋಪಿಗಳು ಕಿರಣಕುಮಾರ್ ಅವರನ್ನು ಊರಿಗೆ ಕರೆಸಿಕೊಂಡು, ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಮ್ಮ ಹೆಣ್ಣು ಮಕ್ಕಳ ಜೀವನ ಹಾಳು ಮಾಡುತ್ತಾನೆ ಎಂಬ ಸಂಶಯದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




