ಬೀದರ್ : ಸಮಾಜ ವಿರೋಧಿ ಚಟುವಟಿಕೆಯಲ್ಲಿ ನಿರತನಾಗಿದ್ದ ಆರೋಪ; ಯುವಕ ಗಡಿಪಾರು

ಬೀದರ್: ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಆರೋಪದಲ್ಲಿ ಭಾಲ್ಕಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ಯುವಕನೊರ್ವನನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಗಡಿಪಾರಾದ ಯುವಕನನ್ನು ಪರಮೇಶ್ವರ್ ಉರ್ಫ್ ಪಮ್ಯಾ (30) ಎಂದು ಗುರುತಿಸಲಾಗಿದೆ.
ಖಟಕ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಾವಿನಹಳ್ಳಿ ಗ್ರಾಮದ ಪರಮೇಶ್ವರ್, ಸುಮಾರು 6 ವರ್ಷದಿಂದ ಸಮಾಜ ವಿರೋಧಿ ಮತ್ತು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡು ಶಾಂತಿ ಭಂಗ ಮಾಡುತ್ತಿದ್ದನು ಎಂದು ಆರೋಪಿಸಲಾಗಿದೆ.
ಈತನ ವಿರುದ್ದ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಕೊಲೆ, ಮಾರಣಾಂತಿಕ ಹಲ್ಲೆ, ಬೆದರಿಕೆ ಸೇರಿದಂತೆ 4 ಪ್ರಕರಣ ದಾಖಲಾಗಿದ್ದವು. ಹೀಗಿದ್ದೂ ಕೂಡ ಈತ ತನ್ನ ಪ್ರವೃತ್ತಿ ಮುಂದುವರೆಸಿಕೊಂಡು ಬಂದಿದ್ದ ಎನ್ನಲಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಜಿಲ್ಲಾಧಿಕಾರಿ ಅವರಿಗೆ ಈತನ ಗಡಿಪಾರಿನ ವರದಿ ನೀಡಿದ್ದರು. ಜಿಲ್ಲಾಧಿಕಾರಿಗಳು ಪರಮೇಶ್ವರ್ ರಿಗೆ 6 ತಿಂಗಳು ಚಾಮರಾಜನಗರದ ಗುಂಡ್ಲಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಸ್ಥಳಾಂತರ ಮಾಡಿ ಗಡಿಪಾರು ಆದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವರದಿ ಸಲ್ಲಿಸಿದ ಖಟಕ ಚಿಂಚೋಳಿ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನ್ ರೆಡ್ಡಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಶ್ಲಾಘಿಸಿದ್ದಾರೆ.







