Bidar | ಮ್ಯಾನೇಜರ್ ನಿಂದ ಕಿರುಕುಳ ಆರೋಪ: ಯುವಕ ಆತ್ಮಹತ್ಯೆ

ಬೀದರ್: ವಸ್ತ್ರ ಮಳಿಗೆಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಮ್ಯಾನೇಜರ್‌ನ ಕಿರುಕುಳದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ನಗರದ ರಾಂಪೂರೆ ಬ್ಯಾಂಕ್ ಕಾಲೋನಿಯ ನಿವಾಸಿ ಲಕ್ಷ್ಮೀಕಾಂತ್ (22) ಎಂದು ಮೃತಪಟ್ಟ ಯುವಕ.
ಲಕ್ಷ್ಮೀಕಾಂತ್ ಕಳೆದ ಮೂರು ತಿಂಗಳಿಂದ ನಗರದ ವಸ್ತ್ರ ಮಳಿಗೆಯೊಂದರಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಕಳೆದ ಕೆಲವು ದಿನಗಳಿಂದ ಮಳಿಗೆಯ ಮ್ಯಾನೇಜರ್ ಕಿಶೋರ್ ಎಂಬಾತ ಲಕ್ಷ್ಮೀಕಾಂತನ ಮೇಲೆ ಕಂಪನಿಯ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಮಾಡಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಇದರಿಂದ ಲಕ್ಷ್ಮೀಕಾಂತ್ ಕಳೆದ ನಾಲ್ಕೈದು ದಿನಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನು ಎಂದು ಮೃತ ಯುವಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಲಕ್ಷ್ಮೀಕಾಂತ್ ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ಬಂದಿದ್ದಾನೆ. ಆ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ ಅಣ್ಣನಿಗೆ ವಾಟ್ಸ್ಆಪ್ ಮೂಲಕ ಧ್ವನಿ ಸಂದೇಶ ಕಳುಹಿಸಿ, 'ನಾನು ಯಾವುದೇ ತಪ್ಪು ಮಾಡಿಲ್ಲ, ಕಂಪನಿಯ ಒಂದು ರೂಪಾಯಿಯನ್ನೂ ತೆಗೆದುಕೊಂಡಿಲ್ಲ' ಎಂದು ಅಳುತ್ತಾ ಹೇಳಿದ್ದಾನೆ. ಬಳಿಕ ಮನೆಯ ಹಾಲ್‌ನ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಘಟನೆ ವಿರೋಧಿಸಿ ಶನಿವಾರ ಮಳಿಗೆಯ ಮುಂದೆ ಆಂಬುಲೆನ್ಸ್ ನಲ್ಲಿ ಮೃತದೇಹವಿಟ್ಟು ಮೃತ ಯುವಕನ ಸಂಬಂಧಿಕರು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.
ಈ ಘಟನೆಗೆ ಸಂಬಂಧಿಸಿದಂತೆ ಗಾಂಧಿಗಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.






