Bidar | ಯುವ ಜನಾಂಗ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ : ನಾಗಪ್ಪ ಜಂಬಗಿ

ಬೀದರ್ : ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಪುಸ್ತಕಗಳು ಅತ್ಯಂತ ಪ್ರಮುಖವಾಗಿದ್ದು, ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನತೆ ಪುಸ್ತಕ ಓದುವ ಹವ್ಯಾಸವನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗಪ್ಪ ಜಂಬಗಿ ಹೇಳಿದರು.
ನಗರದ ಹಿರಿಯ ಸಾಹಿತಿ ಎಸ್.ಬಿ. ಕುಚಬಾಳ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಜಾಗೃತ ಸಮಿತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ರಾಮಾಯಣ, ಮಹಾಭಾರತ ಸೇರಿದಂತೆ ವಿವಿಧ ಗ್ರಂಥಗಳು ಸಮಾಜದಲ್ಲಿ ಸಾಂಸ್ಕೃತಿಕ ಹಾಗೂ ಬೌದ್ಧಿಕ ವಾತಾವರಣ ಬೆಳೆಸಿದ್ದವು. ಇಂದಿನ ಮೊಬೈಲ್ ಯುಗದಲ್ಲಿಯೂ ಪುಸ್ತಕ ಓದುವುದನ್ನು ಬಿಡಬಾರದು. ಲೇಖಕರ ಪುಸ್ತಕ ಪ್ರಕಟಣೆಗೆ ಸರ್ಕಾರ ಆರ್ಥಿಕ ನೆರವು ನೀಡಿದರೆ ಓದುಗರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಶೈಲಜಾ ಹುಡಗೆ, ಇಂದಿನ ಒತ್ತಡದ ಬದುಕಿನಲ್ಲಿ ಪುಸ್ತಕ ಮತ್ತು ಪತ್ರಿಕೆಗಳ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಪುಸ್ತಕಗಳು ಜ್ಞಾನವನ್ನು ವೃದ್ಧಿಸುವ ಸ್ನೇಹಿತರಾಗಿದ್ದು, ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ಇದ್ದರೆ ಸಾಹಿತ್ಯ ಮತ್ತು ಸಂಸ್ಕೃತಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ್ ಮಾತನಾಡಿ, ಲೋಕದ ಪ್ರಜ್ಞೆ ಅರಿತುಕೊಳ್ಳಬೇಕಾದರೆ ಪುಸ್ತಕ ಓದು ಅತ್ಯಗತ್ಯ. ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಮೂಲಕ ಜಿಲ್ಲಾದ್ಯಂತ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಹೆಬ್ಬಾಳೆ ಮಾತನಾಡಿ, ಮೊಬೈಲ್ ಮತ್ತು ತಂತ್ರಜ್ಞಾನದ ಯುಗದಲ್ಲಿ ಮಕ್ಕಳಲ್ಲಿ ಓದುವ ಆಸಕ್ತಿ ಕುಸಿಯುತ್ತಿದೆ. ಪೋಷಕರು ಮಕ್ಕಳ ಕೈಗೆ ಪುಸ್ತಕ ನೀಡುವ ಸಂಸ್ಕೃತಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಸ್.ಬಿ. ಕುಚಬಾಳ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರ ನಿವಾಸದಲ್ಲಿ ಸ್ಥಾಪಿಸಲಾದ ‘ಭೀಮ ರತ್ನ’ ನೂತನ ಗ್ರಂಥಾಲಯ ಕೋಣೆಯನ್ನು ಉದ್ಘಾಟಿಸಿ ಪುಸ್ತಕ ಓದುವ ಸಂಸ್ಕೃತಿ ವಿಸ್ತರಣೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕ ರಾಜಕುಮಾರ್ ಸಿಂಧೆ, ಲಕ್ಷ್ಮಣ್ ಮೇತ್ರೆ, ಗುಂಡಪ್ಪಾ ಹುಡಗೆ, ದೇವೇಂದ್ರ ಡಿಗ್ಗೆ, ಎಂ.ಡಿ.ರಶೀದ್, ಬಿಕ್ಕುಮಿಯ್ಯಾ, ದೇವೆಂದ್ರ ಅಣಕಲೆ, ಲಕ್ಷ್ಮಣ್ ಚಿಟ್ಟಾ, ನರಸಿಂಗ್, ಪ್ರಭಾಕರ್ ಸೋನೆ ಹಾಗೂ ಈಶ್ವರ್ ಸೇರಿದಂತೆ ಬಡಾವಣೆ ನಿವಾಸಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.






