Bidar | ತೆಂಗಿನಕಾಯಿ ಕೀಳಲು ಹೋದ ಯುವಕನಿಗೆ ವಿದ್ಯುತ್ ಸ್ಪರ್ಶ : ಆಸ್ಪತ್ರೆಗೆ ದಾಖಲು

ಬೀದರ್ : ಶ್ರಾವಣ ಮಾಸದ ಪೂಜೆಗೆ ತೆಂಗಿನಕಾಯಿ ಕೀಳಲು ಹೋದ ಯುವಕನಿಗೆ ವಿದ್ಯುತ್ ಸ್ಪರ್ಶಿಸಿ ಗಂಭೀರವಾಗಿ ಗಾಯಗೊಂಡ ಘಟನೆ ಬೀದರ್ ಜಿಲ್ಲೆಯ ಸುಲ್ತಾನಪೂರ್ ಗ್ರಾಮದಲ್ಲಿ ನಡೆದಿದೆ.
ಸುಲ್ತಾನಪೂರ್ ಗ್ರಾಮದ ಭಗವಂತ್ (18) ಗಾಯಗೊಂಡ ಯುವಕ. ಹನುಮಾನ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಶ್ರಾವಣ ಮಾಸದ ಪೂಜಾ ಹಾಗೂ ಸ್ವಚ್ಛತಾ ಕಾರ್ಯಗಳಿಗಾಗಿ ಅಗತ್ಯವಿದ್ದ ತೆಂಗಿನಕಾಯಿಗಳನ್ನು ಕೀಳಲು ಆತ ತೆಂಗಿನ ಮರ ಏರಿದ್ದನು.
ತೆಂಗಿನಕಾಯಿಗಳನ್ನು ಕೆಳಗಿಳಿಸಲು ಭಗವಂತ್ ಕಬ್ಬಿಣದ ರಾಡ್ ಬಳಸುತ್ತಿದ್ದ ವೇಳೆ, ಸಮೀಪದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ರಾಡ್ ತಗುಲಿದೆ. ಇದರಿಂದ ವಿದ್ಯುತ್ ಪ್ರವಹಿಸಿ ಯುವಕನಿಗೆ ತೀವ್ರ ವಿದ್ಯುತ್ ಸ್ಪರ್ಶವಾಗಿದೆ.
ಘಟನೆ ಗಮನಿಸಿದ ಗ್ರಾಮಸ್ಥರು ತಕ್ಷಣವೇ ಯುವಕನನ್ನು ರಕ್ಷಿಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಅವಘಡದ ಬಳಿಕ ದೇವಸ್ಥಾನದ ಆವರಣದ ಸಮೀಪದಿಂದ ಹಾದು ಹೋಗಿರುವ ವಿದ್ಯುತ್ ಕಂಬಗಳು ಹಾಗೂ ತಂತಿಗಳನ್ನು ತಕ್ಷಣ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.




