ಕರಾಟೆಯಲ್ಲಿ ಬೀದರ್‌ನ ಪರ್ವೇಜ್ ಖಾನ್ ವಿಶ್ವ ದಾಖಲೆ : ಡಾ.ಇಮ್ರಾನ್ ಸಯಿದ್

ಬೀದರ್: ಜಿಲ್ಲೆಯ ಯುವ ಕರಾಟೆ ಪಟು ಮೊಹಮ್ಮದ್ ಪರ್ವೇಜ್ ಖಾನ್ ಅವರು ಚೆನ್ನೈನಲ್ಲಿ ನಡೆದ ವಿಶ್ವ ಕರಾಟೆ ದಾಖಲೆ ಕಾರ್ಯಕ್ರಮದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಬೀದರ್ ಜಿಲ್ಲೆ, ಕರ್ನಾಟಕ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ತಂಡದ ವ್ಯವಸ್ಥಾಪಕ ಡಾ. ಇಮ್ರಾನ್ ಸಯಿದ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.16ರಂದು ಚೆನ್ನೈನ ಸೇಂಟ್ ಥಾಮಸ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನಲ್ಲಿ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಪರ್ವೇಜ್ ಖಾನ್ ಭಾಗವಹಿಸಿದ್ದರು ಎಂದರು.
ಒಂದೇ ಸಮಯದಲ್ಲಿ ಅತಿ ಹೆಚ್ಚು ಮಂದಿ ಕರಾಟೆ ಚಾಪ್ ಮಾಡುವ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದುಬೈ, ಅಂಡಮಾನ್ ಮತ್ತು ನಿಕೋಬಾರ್ ಸೇರಿದಂತೆ ವಿವಿಧೆಡೆಗಳಿಂದ ಹಾಗೂ ದೇಶದ ಹಲವು ರಾಜ್ಯಗಳಿಂದ ಸುಮಾರು 800 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಈ ಪೈಕಿ ಕೇವಲ 28 ಸ್ಪರ್ಧಾರ್ಥಿಗಳಿಗೆ ವಿಶೇಷ ಪ್ರದರ್ಶನ ನೀಡುವ ಅವಕಾಶ ದೊರೆತಿತ್ತು.
ಪರ್ವೇಜ್ ಖಾನ್ ಅವರು ಒಂದು ನಿಮಿಷದಲ್ಲಿ 160 ಕರಾಟೆ ಚಾಪ್‌ಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಸಾಮರ್ಥ್ಯ ಮೆರೆದರು. ಅಲ್ಲದೆ, ಕೇವಲ 30 ಸೆಕೆಂಡುಗಳಲ್ಲಿ ನಾಲ್ಕು ವಿಧದ ಪಂಚ್ ಹಾಗೂ ಬ್ಲಾಕ್‌ಗಳನ್ನು ಪ್ರದರ್ಶಿಸಿದರು ಎಂದು ಡಾ. ಇಮ್ರಾನ್ ಸಯಿದ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಚ್ ಸುಮಿತ್ ಮೋರೆ ಮಾತನಾಡಿ, ಪರ್ವೇಜ್ ಖಾನ್ ಅವರ ಸಾಧನೆಯನ್ನು ಗುರುತಿಸಿ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ವತಿಯಿಂದ ಡಬ್ಲ್ಯುಆರ್-02907 ಸಂಖ್ಯೆಯ ವಿಶ್ವ ದಾಖಲೆ ಗೌರವ ಪ್ರಮಾಣಪತ್ರ ಹಾಗೂ ಪದಕ ಪ್ರದಾನ ಮಾಡಲಾಗಿದೆ. ವಿಶ್ವ ದಾಖಲೆ ನಿರ್ದೇಶಕ ಪ್ರವೀಣ್ ರಾಣೆ ಸೇರಿದಂತೆ ಆಯೋಜಕರು ವಿಜೇತರಿಗೆ ಅಭಿನಂದಿಸಿದರು ಎಂದರು.
ಪರ್ವೇಜ್ ಖಾನ್ ಮಾತನಾಡಿ, ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಕುರಿತು ಅರಿವು ಮೂಡಿಸುವುದು ಕರಾಟೆ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿತ್ತು. ಕಠಿಣ ಪರಿಶ್ರಮ, ಶಿಸ್ತು ಹಾಗೂ ದೃಢ ಸಂಕಲ್ಪದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಮೊಬೈಲ್ ಗೇಮ್‌ಗಳಿಗೆ ಮಾರು ಹೋಗಿ ಆರೋಗ್ಯ ಹಾಗೂ ಮಾನಸಿಕವಾಗಿ ದುರ್ಬಲರಾಗುತ್ತಿರುವ ಯುವ ಸಮೂಹ ಕರಾಟೆ, ಕ್ರೀಡೆ ಹಾಗೂ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಸದೃಢ ಹಾಗೂ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ನವಾಜ್ ಖಾನ್, ಕ್ರೀಡಾ ವಿಭಾಗದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತಾಜ್ ಪಟೇಲ್, ಸಂದೀಪಕುಮಾರ್, ಸುಮಿತ್ ಹಾಗೂ ಪ್ರಭಾಕರ್ ಸೇರಿದಂತೆ ಇತರರು ಇದ್ದರು.






