ಬಿಜೆಪಿಗರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಾಸಕ, ಸಚಿವರಿಗೆ ತೊಂದರೆ ನೀಡುತ್ತಿದ್ದಾರೆ : ಸಚಿವ ರಹೀಮ್ ಖಾನ್

ಬೀದರ್ : ಬಿಜೆಪಿ ಪಕ್ಷದವರು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಾಸಕ, ಸಚಿವರನ್ನು ಟಾರ್ಗೆಟ್ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಮ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಕನಕದಾಸ ಜಯಂತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ರಹೀಮ್ ಖಾನ್, ಬೀದರ್ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಅವರ ಆರೋಪ ಸತ್ಯಕ್ಕೆ ದೂರವಾದುದು. ಅವರು ಜಿಲ್ಲಾಧಿಕಾರಿ, ಲೋಕಾಯುಕ್ತ ಹಾಗೂ ನನಗೆ ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ದೂರು ನೀಡಬೇಕಿತ್ತು. ಆದರೆ ಅವರು ಬರೀ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಕೆಲಸವೇ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ತೊಂದರೆ ನೀಡುವುದಾಗಿದೆ ಎಂದು ಆರೋಪಿಸಿದರು.
ವಿದ್ಯುತ್ ಚಾಲಿತ ಚಿತಾಗಾರ ಯಂತ್ರವನ್ನು ಕೋವಿಡ್ ಸಮಯದಲ್ಲಿ ಖರೀದಿ ಮಾಡಲಾಗಿದೆ. ಚಿತಾಗಾರ ಯಂತ್ರ ಇಡುವುದಕ್ಕೆ ಕಟ್ಟಡ ಹಾಗೂ ಅದಕ್ಕೆ ಬೇಕಾಗುವ ಇನ್ನಿತರ ವಸ್ತುಗಳು ತಯಾರಿ ಮಾಡುವುದಕ್ಕೆ ಮುಂಚೆಯೇ ಚಿತಾಗಾರ ಯಂತ್ರ ಖರೀದಿ ಮಾಡಲಾಗಿದೆ. ಹಾಗಾಗಿ ಅದನ್ನು ಚಾಲ್ತಿ ಮಾಡಲಿಲ್ಲ. ಅದಕ್ಕೆ ಕಟ್ಟಡ, ವಿದ್ಯುತ್, ಹೊಗೆ ಹೋಗಲು ಚಿಮಣಿ ಸೇರಿದಂತೆ ಅನೇಕ ರೀತಿಯ ವ್ಯವಸ್ಥೆ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ಇವಾಗ 4 ಕೋಟಿ ರೂ. ಅನುದಾನ ಕೇಳಲಾಗಿದೆ. ಈ ಎಲ್ಲಾ ವ್ಯವಸ್ಥೆಯಾದ ನಂತರ ಯಂತ್ರವು ಚಾಲ್ತಿ ಮಾಡಲಾಗುವುದು. ಒಂದು ವೇಳೆ ಚಿತಾಗಾರ ಯಂತ್ರ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದರೆ ನಾನು ಖಂಡಿತವಾಗಿ ತನಿಖೆಗೆ ಒತ್ತಾಯಿಸುತ್ತೇನೆ ಎಂದರು.
ಕೋವಿಡ್ ಸಮಯದಲ್ಲಿ ಬಿಜೆಪಿ ಏನೆಲ್ಲ ಹಗರಣ ಮಾಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೆಷಿನ್, ಔಷಧಿಗಳ ಬೆಲೆ ಗಗನಕ್ಕೆರಿಸಿದರು. ಆ ಸಮಯದಲ್ಲಿ ಬೇಡ್ ಕೂಡ ಸಿಗಲಿಲ್ಲ. 50 ರೂ. ಇಂಜೆಕ್ಷನ್ 500 ರೂ. ಆಗಿತ್ತು. ಇವರ ಅವಧಿಯಲ್ಲಿ ತುಂಬಾ ಹಗರಣ ನಡೆದಿದೆ. ಅವರು ಬೇರೆಯವರ ಬಗ್ಗೆ ಏನು ಮಾತನಾಡುವುದಿಲ್ಲ. ದಲಿತರು ಎನ್ನುವ ಕಾರಣಕ್ಕೆ ಕಲ್ಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ನನ್ನನ್ನು ಹಾಗೂ ಬೆಂಗಳೂರಿನಲ್ಲಿ ಜಾರ್ಜ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಹೀಮ್ ಖಾನ್ ಆರೋಪಿಸಿದರು.







