ಬಿಜೆಪಿ ಶಾಸಕ ಶರಣು ಸಲಗರ್‌ಗೆ ಬಂಧನದ ವಾರೆಂಟ್

ಬೀದರ್ : 2023ರಲ್ಲಿ ಬಕ್ರೀದ್ ಕುರ್ಬಾನಿ ವಿಚಾರದಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ್ ಸೇರಿದಂತೆ ಸುಮಾರು 9 ಜನರಿಗೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು ಬಂಧನದ ವಾರೆಂಟ್ ಜಾರಿಗೋಳಿಸಿದೆ.
ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳಾದ ಲಿಂಗರಾಜ್, ಸಂತೋಷ್, ಶಿವಕುಮಾರ್, ವಿನೋದ್, ಸಚಿನ್, ರಾಜಕುಮಾರ್, ಶಂಬುಲಿಂಗ್ ಹಾಗೂ ಶರಣಬಸಪ್ಪ ಎನ್ನುವವರಿಗೂ ಕೂಡ ಬಂಧನದ ವಾರೆಂಟ್ ಜಾರಿಯಾಗಿದೆ.
ಪ್ರಕರಣದ ಹಿನ್ನಲೆ : 2023ರ ಜುಲೈ 1ರ ಬಕ್ರೀದ್ ದಿನದಂದು ಶಾಸಕ ಶರಣು ಸಲಗರ್ ಸೇರಿದಂತೆ ಹಲವರು ಬಸವಕಲ್ಯಾಣ ನಗರದ ಹಿರೇಮಠ್ ಕಾಲೋನಿಯ ವ್ಯಕ್ತಿಯೊಬ್ಬರ ಮನೆಗೆ ತೆರಳಿ, ಕುರ್ಬಾನಿ ನೀಡುತ್ತಿರುವ ನಿಮಗೆ ಮಾನ ಮರ್ಯಾದೆ ಇಲ್ಲ. ಕುರ್ಬಾನಿ ನೀಡುತ್ತಿರುವುದು ಬಂದ್ ಮಾಡಬೇಕು ಎಂದು ಆ ಕುಟುಂಬಸ್ಥರಿಗೆ ಬೆದರಿಕೆ ಹಾಕಿ, ದ್ವೇಷದ ಮಾತುಗಳನ್ನಾಡಿದರು ಎಂದು ಆರೋಪಿಸಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು ಬಂಧನದ ವಾರೆಂಟ್ ಜಾರಿಗೊಳಿಸಿದ್ದು, ಶಾಸಕ ಶರಣು ಸಲಗರ್ ಸೇರಿದಂತೆ ಹಲವರಿಗೆ ಬಂಧನದ ಭೀತಿ ಎದುರಾಗಿದೆ.




