ಬರ ಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ಔರಾದ್‌ನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಬರ ಘೋಷಣೆ ಮಾಡದಿದ್ದರೆ ಮುಖ್ಯಮಂತ್ರಿಯವರ ಕಚೇರಿಗೆ ಮುತ್ತಿಗೆ : ಶಾಸಕ ಪ್ರಭು ಚವ್ಹಾಣ್

ಔರಾದ್, ಸೆ.20: ಔರಾದ್ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಶಾಸಕ ಪ್ರಭು ಚವ್ಹಾಣ್ ಅವರ ನೇತೃತ್ವದಲ್ಲಿ ಶನಿವಾರ ಪಟ್ಟಣದಲ್ಲಿ ರೈತರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ, ತಾಲೂಕು ಪಂಚಾಯತ್, ಕನ್ನಡಾಂಬೆ ವೃತ್ತ ಮಾರ್ಗವಾಗಿ ಎಪಿಎಂಸಿ ವೃತ್ತದವರೆಗೆ ಸಾಗಿತು. ನೂರಾರು ರೈತರು ನಾಶವಾದ ಬೆಳೆಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದರು. ಶಾಸಕ ಪ್ರಭು ಚವ್ಹಾಣ ಅವರು ತಲೆಯ ಮೇಲೆ ಒಣಗಿದ ಬೆಳೆ ಹೊತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರೊಂದಿಗೆ ಐಕ್ಯತೆ ವ್ಯಕ್ತಪಡಿಸಿದರು.
ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ನಾಶವಾದ ಬೆಳೆಗಳನ್ನು ಹೆದ್ದಾರಿಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಪ್ರಭು ಚವ್ಹಾಣ, ಸರ್ಕಾರ ಯಾರದ್ದೇ ಆಗಿರಲಿ ರೈತರಿಗೆ ನ್ಯಾಯ ದೊರೆಯಬೇಕು. ಔರಾದ್ ತಾಲೂಕನ್ನು ಕೂಡಲೇ ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
10 ದಿನಗಳೊಳಗೆ ಬರಗಾಲ ಘೋಷಣೆ ಮಾಡದಿದ್ದರೆ ಮುಖ್ಯಮಂತ್ರಿಯವರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಹಾಗೂ ಔರಾದ್‌ನಿಂದ ಬೀದರ್‌ವರೆಗೆ ‘ಬೀದರ್ ಚಲೋ’ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೀದರ್ ಜಿಲ್ಲೆಯ ಇತರೆ ಎಲ್ಲಾ ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಿರುವ ಸರ್ಕಾರ, ಔರಾದ್ ತಾಲೂಕನ್ನು ಮಾತ್ರ ಕಡೆಗಣಿಸಿದೆ. ಈ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು, ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಹಾಗೂ ಔರಾದ್ ತಾಲೂಕನ್ನು ತಕ್ಷಣವೇ ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಕಿರಣ್ ಪಾಟೀಲ್, ಅರಹಂತ್ ಸಾವಳೆ, ಚಂದು ಪಾಟೀಲ್, ವಿಜಯಲಕ್ಷ್ಮಿ ಕೌಟಗೆ, ವಸಂತ್ ಬಿರಾದಾರ್, ಶಿವಾಜಿರಾವ್ ಪಾಟೀಲ್ ಮುಂಗನಾಳ್, ಧೊಂಡಿಬಾ ನರೋಟೆ, ಶಿವರಾಜ್ ಅಲ್ಮಾಜೆ, ಪ್ರಕಾಶ್ ಅಲ್ಮಾಜೆ, ಬಸವರಾಜ್ ಪಾಟೀಲ್, ಖಂಡೋಬಾ ಕಂಗಟೆ, ಪ್ರಕಾಶ್ ಮೇತ್ರೆ, ಪ್ರದೀಪ್ ಪವಾರ್ ಹಾಗೂ ಆನಂದ್ ದ್ಯಾಡೆ ಸೇರಿದಂತೆ ಕಾರ್ಯಕರ್ತರು, ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.






