ಬರ ಘೋಷಣೆಗೆ ಆಗ್ರಹಿಸಿ ಸೆ.19ರಂದು ಔರಾದ್‌ನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಔರಾದ್: ಕಮಲನಗರ್ ಹಾಗೂ ಔರಾದ್ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಆಗ್ರಹಿಸಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಸೆಪ್ಟೆಂಬರ್ 19ರಂದು ಔರಾದ್ ಪಟ್ಟಣದಲ್ಲಿ ಬಿಜೆಪಿ ಔರಾದ್ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಶಾಸಕ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ರವಿವಾರ ನಡೆದ ಸಭೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯ ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ವಿವಿಧ ಸಲಹೆಗಳನ್ನು ನೀಡಿದರು.
ಪ್ರತಿಭಟನೆಗೆ ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುವುದು. ಬಳಿಕ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ರೈತರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಎಪಿಎಂಸಿ ವೃತ್ತದವರೆಗೆ ತೆರಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಪ್ರಭು ಚವ್ಹಾಣ, ಔರಾದ್ ಹಾಗೂ ಕಮಲನಗರ್ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದೆ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಪಹಣಿ ತಿದ್ದುಪಡಿ, ಮ್ಯುಟೇಷನ್ ಸೇರಿದಂತೆ ಹಲವು ಸೇವೆಗಳ ಶುಲ್ಕ ಹೆಚ್ಚಿಸಿ ರೈತರು ಮತ್ತು ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಹೊರೆ ಹಾಕಿದೆ. ಸಾವಿರಾರು ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸಿ ಬಡ ಕುಟುಂಬಗಳಿಗೆ ತೊಂದರೆ ನೀಡಲಾಗಿದೆ. ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಲ್ಲೂ ಸಮಸ್ಯೆಗಳು ಉಂಟಾಗಿವೆ ಎಂದು ಅವರು ಟೀಕಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ 560 ಕೋಟಿ ರೂ. ವೆಚ್ಚದ ಕೆರೆ ತುಂಬಿಸುವ ಯೋಜನೆ ಹಾಗೂ ಕಾರಂಜಾ ಜಲಾಶಯದಿಂದ ನೀರು ಸರಬರಾಜು ಯೋಜನೆ ಸೇರಿದಂತೆ ಹಲವು ಕಾಮಗಾರಿಗಳನ್ನು ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದೆ ಎಂದು ಆರೋಪಿಸಿದ ಅವರು, ರೈತರ ಹಿತಾಸಕ್ತಿಗಾಗಿ ಸೆ.19ರ ಪ್ರತಿಭಟನೆಯನ್ನು ಬೃಹತ್ ಹೋರಾಟವನ್ನಾಗಿ ರೂಪಿಸಲಾಗುವುದು ಎಂದರು.
ಔರಾದ್ ಹಾಗೂ ಕಮಲನಗರ್ ತಾಲೂಕಿನ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕಿರಣ್ ಪಾಟೀಲ್, ರಾಮಶೆಟ್ಟಿ ಪನ್ನಾಳೆ, ರಂಗರಾವ್ ಜಾಧವ್, ಶಿವರಾಜ್ ಅಲ್ಮಾಜೆ, ಶಿವಾಜಿರಾವ್ ಪಾಟೀಲ್ ಮುಂಗನಾಳ್, ಶಿವಾಜಿರಾವ್ ಕಾಳೆ, ಸತೀಷ್ ಪಾಟೀಲ್, ಧೊಂಡಿಬಾ ನರೋಟೆ, ಬಾಬುರಾವ್ ತೋರ್ಣಾವಾಡಿ, ಪ್ರವೀಣ್ ಕಾರಬಾರಿ, ಖಂಡೋಬಾ ಕಂಗಟೆ, ಬಂಟಿ ರಾಂಪೂರೆ, ರಾಜಕುಮಾರ್ ಸೋರಾಳೆ, ಉದಯ್ ಸೋಲಾಪೂರೆ, ಸಂಜು ಮುರ್ಕೆ, ಸಚಿನ್ ಬಿರಾದಾರ್, ರವೀಂದ್ರರೆಡ್ಡಿ, ಪ್ರಕಾಶ್ ಮೇತ್ರೆ, ವಿಜಯಕುಮಾರ್ ದೇಶಮುಖ, ಗುಂಡಪ್ಪ ಬಿರಾದಾರ್, ರಮೇಶ್ ಪಾಟೀಲ್, ದೇವಾನಂದ್ ಪಾಟೀಲ್, ಪ್ರಭುರಾವ್ ಜೀರ್ಗೆ, ಪ್ರದೀಪ್ ಪವಾರ್, ಕೇರಬಾ ಪವಾರ್, ಪ್ರಕಾಶ್ ಅಲ್ಮಾಜೆ ಹಾಗೂ ಬಸವರಾಜ್ ಹಳ್ಳೆ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.






