ʼಜಾತಿಗಣತಿʼಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನೆಲೆಯಲ್ಲಿ ಆಗಬೇಕು : ಈಶ್ವರ್ ಖಂಡ್ರೆ

ಈಶ್ವರ್ ಖಂಡ್ರೆ
ಬೀದರ್ : ಕೇಂದ್ರ ಸರಕಾರ ಜಾತಿ ಗಣತಿಗಷ್ಟೇ ಸೀಮಿತವಾಗದೆ, ಯಾವುದೇ ಜಾತಿ ಜನಾಂಗಕ್ಕೆ ಅನ್ಯಾಯವಾಗದ ರೀತಿಯಲ್ಲಿ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಸಮೀಕ್ಷೆಯನ್ನು ನಡೆಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.
ಕೇಂದ್ರ ಸರಕಾರವೇ ಜಾತಿ ಗಣತಿ ಮಾಡುವ ಘೋಷಣೆ ಮಾಡಿರುವ ಬಗ್ಗೆ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲೇ ಜಾತಿ ಗಣತಿ ನಡೆಸುವ ಆಶ್ವಾಸನೆ ನೀಡಿತ್ತು. ಕೇಂದ್ರ ಸರಕಾರ ಈಗ ನಮ್ಮ ನಿಲುವನ್ನು ಬೆಂಬಲಿಸಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರ ಕೇವಲ ಜಾತಿಗಳ ತಲೆ ಎಣಿಕೆ ಮಾಡಿದರೆ ಸಾಲದು, ದೇಶದ ಎಲ್ಲ ಜಾತಿಯ ಜನರ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ನಿಖರ ಸಮೀಕ್ಷೆ ನಡೆಸಬೇಕು. ಆಗ ಮಾತ್ರ ಸರ್ವರಿಗೂ ನ್ಯಾಯ ಸಿಗಲು ಸಾಧ್ಯ ಎಂದು ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟರು.
ಭಾರತದಲ್ಲಿ ಜಾತಿ ಜನಗಣತಿ ಮೊದಲ ಬಾರಿಗೆ 1931ರಲ್ಲಿ ನಡೆದಿತ್ತು. ಅದೇ ಮೊದಲು ಮತ್ತು ಅದೇ ಕಡೆಯ ಜಾತಿ ಗಣತಿಯೂ ಆಗಿತ್ತು. ಅದಾದ ನಂತರ ಕಾಂಗ್ರೆಸ್ ಪಕ್ಷ ಜಾತಿಗಣತಿಯ ಅಗತ್ಯವನ್ನು ಪ್ರತಿಪಾದಿಸಿತ್ತು. ಇಂದು ಸಮ ಸಮಾಜದ ಕನಸು ಕಂಡಿದ್ದ ಬಸವಣ್ಣನವರ ಜನ್ಮ ದಿನ. ಅವರ ಆಶಯದಂತೆ ಎಲ್ಲ ಜನ, ಜಾತಿ ಸಮುದಾಯದ ದುರ್ಬಲರಿಗೆ, ಹಿಂದುಳಿದವರಿಗೆ ಸಮಾನ ಅವಕಾಶ ದೊರಕಬೇಕು ಎಂಬುದು ಕಾಂಗ್ರೆಸ್ ಸರಕಾರದ ನಿಲುವಾಗಿದೆ ಎಂದು ಅವರು ಹೇಳಿದರು.
ಸರಕಾರದ ಯೋಜನೆಗಳ ಪ್ರಯೋಜನ ಎಲ್ಲ ವಂಚಿತರಿಗೂ ಲಭ್ಯವಾಗಬೇಕು ಮತ್ತು ಹಿಂದುಳಿದಿರುವಿಕೆಯ ಆಧಾರದ ಮೇಲೆ ಸರಕಾರದ ಯೋಜನೆಗಳನ್ನು ರೂಪಿಸಬೇಕು. ಇದಕ್ಕೆ ಜಾತಿಗಣತಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಆಧಾರದಲ್ಲಿ ನಡೆದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
1931ರ ನಂತರ ಭಾರತದಾದ್ಯಂತ ಈವರೆಗೆ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿಲ್ಲ. ಹೀಗಾಗಿ ಸರಕಾರದ ಸೌಲಭ್ಯಗಳು ಸಮಪರ್ಕವಾಗಿ ಹಂಚಿಕೆ ಆಗುತ್ತಿಲ್ಲ. ಅರ್ಹ ಫಲಾನುಭವಿಗಳನ್ನು ಗುರುತಿಸಲು, ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೆತ್ತಲು ಆಗುತ್ತಿಲ್ಲ. ಹೀಗಾಗಿ ಜಾತಿ ಗಣತಿ ಇಂದಿನ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.







