ಚಿಟಗುಪ್ಪ | ಜಿಲ್ಲಾ ಮಟ್ಟದ 200 ಮೀ. ಓಟದಲ್ಲಿ ನವೀನಕುಮಾರ್ಗೆ ದ್ವಿತೀಯ ಸ್ಥಾನ : ರಾಜ್ಯಮಟ್ಟಕ್ಕೆ ಆಯ್ಕೆ

ಚಿಟಗುಪ್ಪ: ತಾಲ್ಲೂಕಿನ ಕಂದಗೂಳ್ನ ಡಾ.ಚನ್ನಬಸವ ಪಟ್ಟದೇವರ ಗುರುಕುಲ ಶಾಲೆಯ ವಿದ್ಯಾರ್ಥಿ ನವೀನಕುಮಾರ್ ಜಿಲ್ಲಾ ಮಟ್ಟದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಸಂಸ್ಥಾಪಕ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು, ಗುರುಬಸವ ಪಟ್ಟದೇವರು, ಆಡಳಿತಾಧಿಕಾರಿ ಮೋಹನ್ ರೆಡ್ಡಿ, ಶಾಲೆಯ ಸ್ಥಾನಿಕ ಸಮಿತಿ ಅಧ್ಯಕ್ಷ ಮಾಣಿಕಪ್ಪ ಹೌಶೆಟ್ಟಿ, ಮುಖ್ಯಶಿಕ್ಷಕಿ ರೇಖಾ ಚಾಳಕ್ಕನವರ್, ದೈಹಿಕ ಶಿಕ್ಷಕ ಮಂಜುನಾಥ್ ಚಾಳಕ್ಕನವರ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ವಿದ್ಯಾರ್ಥಿಗೆ ಶುಭ ಹಾರೈಸಿದ್ದಾರೆ.
ಕಳೆದ ಐದು ವರ್ಷಗಳಿಂದ ಕಂದಗೂಳ್ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಸತತವಾಗಿ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಸರ್ವಾಂಗೀಣ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಲಾಗುವುದು ಎಂದು ಮುಖ್ಯಶಿಕ್ಷಕಿ ರೇಖಾ ತಿಳಿಸಿದ್ದಾರೆ.




