ಚಿಟಗುಪ್ಪ | ಸಾರ್ವಜನಿಕರು ಪ್ರಜಾಸೇವಾ ಜನಸಂಪರ್ಕ ಸಭೆಯ ಸದುಪಯೋಗ ಪಡೆದುಕೊಳ್ಳಿ: ತಹಶೀಲ್ದಾರ್ ಮಂಜುನಾಥ ಪಂಚಾಳ್

ಚಿಟಗುಪ್ಪ: ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಜಾಸೇವಾ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಮಂಜುನಾಥ ಪಂಚಾಳ್ ಹೇಳಿದರು.
ತಾಲ್ಲೂಕಿನ ಇಟಗಾ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಅರ್ಜಿಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಪ್ರಜಾಸೇವಾ ಜನಸಂಪರ್ಕ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಸರ್ಕಾರದ ಯೋಜನೆಗಳು ಹಾಗೂ ವಿವಿಧ ದಾಖಲೆಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿಗಳು ಈ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಂದಾಯ, ಆರ್‌ಡಿಪಿಆರ್, ಅಬಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 45 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡುವಂತೆ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಲಿಂಗರಾಜ್ ಪಾಟೀಲ್, ಬಿಇಒ ವೆಂಕಟೇಶ್ ಗುಡಾಳ್, ಸಿಡಿಪಿಒ ಶಿವಪ್ರಕಾಶ್ ಹಿರೇಮಠ್, ಪರಿಶಿಷ್ಟ ಪಂಗಡಗಳ ಅಧಿಕಾರಿ ಶ್ರೀಶೈಲ್, ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ್ ಸಿದ್ದೇಶ್ವರ್, ಆಹಾರ ನಿರೀಕ್ಷಕಿ ನಮ್ರತಾ, ಅರಣ್ಯ ಅಧಿಕಾರಿ ವೀರಯ್ಯ ಸ್ವಾಮಿ, ಇಟಗಾ ಗ್ರಾಮ ಆಡಳಿತ ಅಧಿಕಾರಿ ವಿಠ್ಠಲ್ ಸೇಡಂಕರ್, ಪಿಡಿಒ ಅಶ್ವಿನಿ, ಜನಾರ್ಧನ್ ರೆಡ್ಡಿ, ಆರ್‌ಐ ಉಮೇಶ್, ವಿಎಗಳಾದ ವಿಠ್ಠಲ್, ಪುಂಡಲೀಕ್, ರಾಧಾ ಹಾಗೂ ರಾಧಿಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.






