ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾದಾಗ ಮಾತ್ರ ಆದಿವಾಸಿಗಳ ಸಮಗ್ರ ಅಭಿವೃದ್ಧಿ ಸಾಧ್ಯ : ಮಾಣಿಕ್ ನೇಳಗಿ

ಬೀದರ್ : ಬುಡಕಟ್ಟು ಸಮುದಾಯಗಳು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾದಾಗ ಮಾತ್ರ ಆದಿವಾಸಿಗಳ ಸಮಗ್ರ ಅಭಿವೃದ್ಧಿ ಸಾಧ್ಯ. ಹೀಗಾಗಿ ಸಮುದಾಯದ ಯುವಜನರು ಉನ್ನತ ಶಿಕ್ಷಣ ಪಡೆಯುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಹಿರಿಯ ಸಾಹಿತಿ ಮಾಣಿಕ್ ನೇಳಗಿ ಅವರು ಅಭಿಪ್ರಾಯಪಟ್ಟರು.
ನಗರದ ಬೋಮಗೊಂಡೇಶ್ವರ್ ವೃತ್ತದಲ್ಲಿ ರವಿವಾರ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೀದರ್ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅವರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಹಾಗೂ ಸಮಾಜ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾ ಆದಿವಾಸಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ಡುಮ್ಮೆ ಅವರು ಮಾತನಾಡಿ, ದಕ್ಷಿಣ ಭಾರತದ ಟ್ರೈಬಲ್ ಐಕಾನ್ ಮಹಾತ್ಮ ಬೊಮ್ಮಗೊಂಡರು ಬೀದರ್ ಜಿಲ್ಲೆಯ ನೆಲದಲ್ಲಿ ಜನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ಜನ್ಮಸ್ಥಳ ಚಿದ್ರಿಯಲ್ಲಿರುವುದರಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬೊಮ್ಮಗೊಂಡರ ಹೆಸರಿಡಬೇಕು. ಬೀದರ್ ಕೋಟೆಯಲ್ಲಿರುವ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಅವರ ಹೆಸರಿನ ಕೆರೆಯನ್ನೂ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಗೊಂಡ, ಕೋಲ್, ಮುಂಡಾ, ಭಿಲ್, ಸಂತಾಲ್ ಸೇರಿದಂತೆ ದೇಶದ ವಿವಿಧ ಬುಡಕಟ್ಟು ಸಮುದಾಯಗಳ ಇತಿಹಾಸವನ್ನು ಸ್ಮರಿಸದೆ ಭಾರತದ ಆದಿವಾಸಿ ಇತಿಹಾಸ ಪೂರ್ಣವಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಜಿಲ್ಲೆಯಲ್ಲಿರುವ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಟ್ರೈಬಲ್ ಮ್ಯೂಸಿಯಂ ಅನ್ನು ಬೀದರ್ ನಲ್ಲಿ ನಿರ್ಮಿಸಬೇಕು ಎಂದು ಬೀದರ್ ಜಿಲ್ಲಾ ಆದಿವಾಸಿ ರಕ್ಷಣಾ ಪರಿಷತ್ತು ಹಾಗೂ ಜಿಲ್ಲಾ ಆದಿವಾಸಿ ಸಾಹಿತ್ಯ ಪರಿಷತ್ತಿನಿಂದ ಈ ವೇಳೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ್ ಚಿಮಕೋಡ್, ಜಿಲ್ಲಾ ಟೋಕರೆ ಕೋಳಿ ಸಮಾಜದ ಉಪಾಧ್ಯಕ್ಷ ಸುನೀಲ್ ಕಾಶಂಪೂರ್, ರವಿ ಢೋಣೆ, ಪ್ರಭು ಮೇತ್ರೆ, ಸಂಗೊಳ್ಳಿ ರಾಯಣ್ಣ ಯುವ ಗರ್ಜನೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ಹಜ್ಜರಗಿ, ಆದಿವಾಸಿ ಸಮುದಾಯದ ಮುಖಂಡರಾದ ರಮೇಶ್ ಬಾಲೆಬಾಯಿ, ವಿವೇಕ್ ರಾಜಗೊಂಡ್ ಹಾಗೂ ಮಹೇಶ್ ಮೇದಾ ಸೇರಿದಂತೆ ಹಲವರು ಭಾಗವಹಿಸಿದ್ದರು.






