ಅ.5 ರಂದು ಬೆಂಗಳೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ

ಬೀದರ್ : ಅ.5 ರಂದು ಬೆಂಗಳೂರಿನ ಅರಮನೆ ಮೈದಾನ ಗಾಯತ್ರಿ ವಿಹಾರ ಗೇಟ್ ಸಂಖ್ಯೆ 4ರಲ್ಲಿ ಅತ್ಯಂತ ಭವ್ಯವಾಗಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಜರುಗಲಿದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ವಿಶ್ವಗುರು ಬಸವಣ್ಣನವರು ಕರ್ನಾಟಕದ ‘ಸಾಂಸ್ಕೃತಿಕ ನಾಯಕ’ ಘೋಷಣೆಯ ವರ್ಷಾಚರಣೆಯ ಸಂದರ್ಭದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನವು ಸೆ.1 ರಂದು ಬಸವಣ್ಣನವರ ಜನ್ಮಭೂಮಿಯಾದ ಬಸವನ ಬಾಗೇವಾಡಿಯಲ್ಲಿ ಆರಂಭಗೊಂಡು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಚರಿಸಿ ವಿದ್ಯಾರ್ಥಿಗಳ ಜೊತೆ ವಚನ ಸಂವಾದ, ಬಸವ ರಥದ ಮೆರವಣಿಗೆ, ಶರಣರ ಚಿಂತನೆಗಳ ಕುರಿತು ಉಪನ್ಯಾಸಗಳು, ಪರಮಪೂಜ್ಯರ ಅನುಭಾವ ಹಾಗೂ ಆಶೀರ್ವಚನ ಜೊತೆಗೆ ‘ಜಂಗ ಮದೆಡೆಗೆ’ ನಾಟಕ ಪ್ರದರ್ಶನ ಮುಂತಾದ ರೀತಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಸಾಗಿ ಬಂದಿದೆ ಎಂದು ತಿಳಿಸಲಾಗಿದೆ.
ಈ ಅಭಿಯಾನವು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದೇವರು, ಗದಗಿನ ಜಗದ್ಗುರು ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿ, ತರಳಬಾಳು ಶಾಖಾ ಮಠ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹಾಗೂ ಕೂಡಲಸಂಗಮ ಬಸವಧರ್ಮ ಪೀಠದ ಜಗದ್ಗುರು ಗಂಗಾದೇವಿ ಮಾತಾಜಿ ಹಾಗೂ ನಾಡಿನ ಅನೇಕ ಪೂಜ್ಯರು, ಹರಗುರುಚರಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ಹೇಳಲಾಗಿದೆ.
ಅ.5 ರಂದು ಬೆಂಗಳೂರಿನ ಅರಮನೆ ಮೈದಾನ ಗಾಯತ್ರಿ ವಿಹಾರ ಗೇಟ್ ಸಂಖ್ಯೆ 4 ರಲ್ಲಿ ನಡೆಯುವ ಸಮಾರೋಪ ಸಮಾರಂಭಕ್ಕೆ ನಾಡು ಹಾಗೂ ಹೊರನಾಡಿನ ಸುಮಾರು 400 ಮಠಾಧೀಶರು ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ವಿಶೇಷ ಗೌರವ ಅಭಿನಂದನೆ ಸಲ್ಲಿಸಲು ನಿರ್ಧರಿಸಲಾಗಿದೆ. ರಾಜ್ಯ ಸರಕಾರದ ಸಚಿವ ಸಂಪುಟದ ಎಲ್ಲ ಸಚಿವರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ನಮ್ಮ ನಾಡಿನ ಎಲ್ಲ ಬಸವಪರ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ರಾಜ್ಯ-ಹೊರರಾಜ್ಯದ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದೆ. ಹಾಗಾಗಿ ರಾಜ್ಯದ ಸಮಸ್ತ ಬಸವಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ಮೂಲಕ ಮನವಿ ಮಾಡಲಾಗಿದೆ.







