ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಸಾಮಾಜಿಕ ಪರಿಶೋಧನೆಯನ್ನು ಜವಾಬ್ದಾರಿಯಿಂದ ನಿರ್ವಹಿಸಿ : ಸಿಇಓ ಡಾ.ಗಿರೀಶ್ ಬದೋಲೆ

ಬೀದರ್ : ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಾಮಾಜಿಕ ಪರಿಶೋಧನೆಯು ಕಡ್ಡಾಯ ಪ್ರಕ್ರಿಯೆಯಾಗಿದ್ದು ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಸೂಚಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2025ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ನೋಡಲ್ ಅಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಈಗಾಗಲೇ ಸಾಮಾಜಿಕ ಲೆಕ್ಕ ಪರಿಶೋಧನೆಯ ದಿನಾಂಕಗಳು ನಿಗದಿಪಡಿಸಿ ಕಳುಹಿಸಲಾಗಿದೆ. ಆ ನಿಗದಿತ ದಿನಾಂಕಗಳಂದೇ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಗಳನ್ನು ಜರುಗಿಸಬೇಕು. ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಪಿಡಿಓ, ಅನುಷ್ಠಾನ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ನರೇಗಾ ತಾಂತ್ರಿಕ ಸಿಬ್ಬಂದಿಯವರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
15ನೇ ಹಣಕಾಸು ಆಯೋಗದ ಅನುದಾನ ಏಪ್ರಿಲ್ 2024 ರಿಂದ ಮಾರ್ಚ್ 2025 ರ ವರೆಗಿನ ಅವಧಿಯ ನರೇಗಾ ಹಣಕಾಸು ಆಯೋಗದ ಏಪ್ರಿಲ್ 2020 ರಿಂದ ಮಾರ್ಚ್ 2025 ರವರೆಗೆ ಅನುಷ್ಠಾನಗೊಂಡ ಎಲ್ಲಾ ಕಾಮಗಾರಿಗಳ ಸಾಮಾಜಿಕ ಪರಿಶೋಧನೆ ನಡೆಸಲಾಗುತ್ತಿದ್ದು, ನಿಗದಿತ ವೇಳಾಪಟ್ಟಿಯಂತೆ ಗ್ರಾಮ ಪಂಚಾಯತ್ ನೋಡಲ್ ಅಧಿಕಾರಿ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದರು.
ಸಾಮಾಜಿಕ ಪರಿಶೋಧನೆಗೆ ಅಗತ್ಯವಿರುವ ಕಡತ, ದಾಖಲೆಗಳನ್ನು 15 ದಿನಗಳ ಮುಂಚಿತವಾಗಿ ಸಾಮಾಜಿಕ ಪರಿಶೋಧನಾ ತಂಡಕ್ಕೆ ನೀಡಬೇಕು. ಸಾಮಾಜಿಕ ಪರಿಶೋಧನಾ ಪ್ರಕ್ರಿಯೆ ಪ್ರಾರಂಭಿಸುವ ಮೊದಲು ವಾರದಲ್ಲಿ 3 ಬಾರಿ ಹಾಗೂ ಗ್ರಾಮ ಸಭೆಯ ಹಿಂದಿನ ದಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಸಾರಿ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಹೆಚ್ಚು ಜನಸಂದಣಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಪರಿಶೋಧನೆಯ ಕುರಿತು ಬ್ಯಾನರ್‌ಗಳು ಅಳವಡಿಸಬೇಕು. ಹಾಗೆಯೇ ಸಾಮಾಜಿಕ ಪರಿಶೋಧನಾ ವೇಳಾಪಟ್ಟಿಯನ್ನು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರಚಾರಪಡಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮತ್ತು ನರೇಗಾ ಜಿಲ್ಲಾ ನೋಡಲ್ ಅಧಿಕಾರಿ ಮುಕ್ಕಣ್ಣ ಕರಿಗಾರ್, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್, ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎಫ್ ಎ.ಬಿ.ಪಾಟೀಲ್, ಪಿ ಆರ್ ಇ ಡಿಯ ಕಾರ್ಯಪಾಲಕ ಅಭಿಯಂತರ ಶಿವಾಜಿ ದೋಣಿ, ಸಾಮಾಜಿಕ ಲೆಕ್ಕ ಪರಿಶೋಧನೆಯ ಜಿಲ್ಲಾ ವ್ಯವಸ್ಥಾಪಕ ದೇವದಾಸ್, ಎಡಿಪಿಸಿ ದೀಪಕ್ ಕಡಿಮನಿ, ನರೇಗಾ ಅಧೀಕ್ಷಕ ಬಶೀರ್, ಡಿಐಇಸಿ ರಜನಿಕಾಂತ್, ಮುಹಮ್ಮದ್ ಹಾಗೂ ಎಲ್ಲಾ ತಾಲ್ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿ, ನರೇಗಾ ಸಹಾಯಕ ನಿರ್ದೇಶಕ, ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಪಿಡಿಒ, ಟಿಸಿ, ಟಿಐಇಸಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.







