ವಿಬಿ-ಜಿ ರಾಮ ಜಿ ಕುರಿತು ಕಾಂಗ್ರೆಸ್ ಸುಳ್ಳು ಪ್ರಚಾರ ನಡೆಸುತ್ತಿದೆ : ಶಾಸಕ ಸಿದ್ದು ಪಾಟೀಲ್

ಬೀದರ್ : ವಿಬಿ-ಜಿ ರಾಮ ಜಿ ಯೋಜನೆಯು ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಕಾರ್ಮಿಕ ಹಾಗೂ ಗ್ರಾಮೀಣ ಜನತೆಗೆ ನೇರ ಲಾಭ ನೀಡುವ ಉದ್ದೇಶ ಹೊಂದಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಿಲ್ ಬಗ್ಗೆ ಜನರನ್ನು ಉದ್ದೇಶ ಪೂರ್ವಕವಾಗಿ ದಾರಿ ತಪ್ಪಿಸುತ್ತಿದ್ದು, ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಬೀಳುತ್ತದೆ ಎಂಬ ಕಾರಣದಿಂದಲೇ ಕಾಂಗ್ರೆಸ್ ಪಕ್ಷ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಕಿಡಿ ಕಾರಿದರು.
ಹುಮನಾಬಾದ್ ನ ಕ್ಷೇತ್ರದ ಸಿಂದಬಂದಗಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಮಂಡಲ ವತಿಯಿಂದ ವಿಬಿ-ಜಿ ರಾಮ್ ಜಿ ಯೋಜನೆಯ ಕುರಿತು ನಡೆಸಿದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬಿಲ್‌ನಡಿ ಕಾರ್ಮಿಕ ಕೆಲಸದ ದಿನಗಳು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ತಂತ್ರಜ್ಞಾನ ಬಳಕೆಯ ಮೂಲಕ ಪಾರದರ್ಶಕತೆ ಹೆಚ್ಚಿಸಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತಡೆಯುವ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ಒದಗಿಸುವುದರ ಜೊತೆಗೆ, ವೇತನವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಸುಸೂತ್ರ ವ್ಯವಸ್ಥೆಯನ್ನು ಈ ಯೋಜನೆ ಮೂಲಕ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಗ್ರಾಮದ ಜನರ ಕುಂದುಕೊರತೆಗಳು ಆಲಿಸಿದ ಅವರು, ಸಮಸ್ಯೆಗಳು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಅನಿಲ್ ಪಸರ್ಗಿ , ಬಿಜೆಪಿ ಪಕ್ಷದ ಹಿರಿಯ ಮುಖಂಡ ವಿಶ್ವನಾಥ್ ಮಾಡಗುಳ್, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅರುಣ್ ಬಾವಗಿ, ಸಂತೋಷ್ ಪಾಟೀಲ್, ಮಂಡಲ ಕಾರ್ಯದರ್ಶಿ ರವಿ ಹೊಸಳ್ಳಿ , ಗೋಪಾಲಕೃಷ್ಣ ಮೊಹಾಳೆ, ಪಕ್ಷದ ಮುಖಂಡರಾದ ಸೋಮು ಮರಖಲ್, ರಾಮರೆಡ್ಡಿ ಪಾಟೀಲ್, ರವಿ ನಿಜಾಂಪುರೆ, ನಾಗೇಶ್ ಒಂಟಿ, ವೈಜಿನಾಥ್ ನಿಂಗರೆಡ್ಡಿ , ಅಜಯ್ ಭೋವಿ ಹಾಗೂ ಕಂಟೆಪ್ಪ ನಿಂಗರೆಡ್ಡಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.






