ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಂಗ್ರೆಸ್‌ನಿಂದ ‘ಛಾತ್ರೋಂ ಕಿ ಗೂಂಜ್’ ಅಭಿಯಾನಕ್ಕೆ ಚಾಲನೆ : ಬಸವರಾಜ್ ಜಾಬಶೆಟ್ಟಿ

ಬೀದರ್ : ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ವಂಚನೆ, ಪರೀಕ್ಷೆಗಳ ರದ್ದು ಹಾಗೂ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸ ಕುಸಿತದ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೇಶಾದ್ಯಂತ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಗರ್ಜನೆ) ಅಭಿಯಾನಕ್ಕೆ ಚಾಲನೆ ನೀಡಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ 28 ಪ್ರಮುಖ ನಗರಗಳಲ್ಲಿ 40 ದಿನಗಳ ಕಾಲ ನಡೆಯಲಿರುವ ಈ ಅಭಿಯಾನವು ವಿದ್ಯಾರ್ಥಿಗಳ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವ ಉದ್ದೇಶ ಹೊಂದಿದೆ ಎಂದರು.
ಅಭಿಯಾನದ ಅಂಗವಾಗಿ ಜೂ.30ರಿಂದ ದೇಶದ 28 ನಗರಗಳಲ್ಲಿ ಕರಪತ್ರ ವಿತರಣೆ, ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮಗಳು ಹಾಗೂ ಬೀದಿ ಸಭೆಗಳು ನಡೆಯಲಿವೆ. ಜುಲೈ ತಿಂಗಳಿಡೀ ಕ್ಯಾಂಪಸ್ ಸಂಪರ್ಕ ಅಭಿಯಾನ ಮತ್ತು ವಿವಿಧ ವಿದ್ಯಾರ್ಥಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆ.1ರಂದು ಜಿಲ್ಲಾಧಿಕಾರಿಗಳ ಕಚೇರಿಗಳ ಮುತ್ತಿಗೆ ಹಾಗೂ ಆ.9ರಂದು ದೆಹಲಿಯಲ್ಲಿ ಸಂಸತ್ ಮುತ್ತಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕಾಂಗ್ರೆಸ್ ಪಕ್ಷದ ಮೂಲಕ ಕೋಚಿಂಗ್ ಕೇಂದ್ರಗಳು, ಕಾಲೇಜು ಕ್ಯಾಂಪಸ್‌ಗಳು, ಹಾಸ್ಟೆಲ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ ಅವರ ಧ್ವನಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಪ್ರಾಮಾಣಿಕವಾಗಿ ಓದುವ ಪ್ರತಿಯೊಬ್ಬ ವಿದ್ಯಾರ್ಥಿಗೂ ನ್ಯಾಯಯುತ ಪರಿಕ್ಷೆಯ ಅವಕಾಶ ಸಿಗಬೇಕು ಎಂಬುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ಕುರಿತು ಸಮಗ್ರ ತನಿಖೆ ನಡೆಸಬೇಕು. ಹಾಗೆಯೇ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಬೇಕು. ಅದರ ಜೊತೆಗೆ, ವಾರ್ಷಿಕ ಪರೀಕ್ಷೆಗಳು ಮತ್ತು ನೇಮಕಾತಿಗಳಿಗಾಗಿ ನಿಗದಿತ ಕ್ಯಾಲೆಂಡರ್ ಜಾರಿಗೆ ತಂದು ದಿನಾಂಕಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೊಡೆ, ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ವಿಠಲದಾಸ್ ಪ್ಯಾಗೆ, ಅಬ್ದುಲ್ ಸತ್ತಾರ್, ಶಿವನಾಥ್ ಪಾಟೀಲ್, ಸಚಿನ್ ಮಲ್ಕಾಪುರೆ, ಪಕ್ಷದ ಪ್ರಚಾರ ಸಮಿತಿಯ ಮುಖಂಡರಾದ ಸುನಿಲ್ ಬಚ್ಚನ್, ಸಂಜು ಡಿ.ಕೆ ಹಾಗೂ ರವಿಂದ್ರ ಸೇರಿದಂತೆ ಇತರರು ಇದ್ದರು.






