ಬೀದರ್‌ನಲ್ಲಿ ನಿರಂತರ ಮಳೆ | ರಸ್ತೆ, ಸೇತುವೆ, ವಿದ್ಯುತ್ ಪುನರ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಕಡಿತಗೊಂಡಿರುವ ರಸ್ತೆ ಮತ್ತು ವಿದ್ಯುತ್ ಸಂಪರ್ಕವನ್ನು ಕೂಡಲೇ ಪುನರ್ ಸ್ಥಾಪಿಸುವಂತೆ ಮತ್ತು ವಿಳಂಬವಿಲ್ಲದೆ ಪರಿಹಾರ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.
ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಸಚಿವರು, ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಎಸ್ಪಿ, ತಹಶೀಲ್ದಾರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಳೆ ಹಾನಿಯ ಸ್ಥಿತಿಗತಿ, ರಕ್ಷಣೆ ಹಾಗೂ ಪರಿಹಾರ ಕಾಮಗಾರಿಗಳ ಮಾಹಿತಿ ಪಡೆದಿದ್ದಾರೆ.
ಮಳೆ ಮತ್ತು ಪ್ರವಾಹದಂತ ಪರಿಸ್ಥಿತಿಯಿಂದ ಜಾನುವಾರುಗಳು ಮೃತಪಟ್ಟಿದ್ದು, ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಲು ಮತ್ತು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ, ಧಾನ್ಯ, ಬಟ್ಟೆ, ಪಾತ್ರೆ ಇತ್ಯಾದಿ ಹಾಳಾಗಿರುವ ಪ್ರಕರಣಗಳಲ್ಲಿ ತುರ್ತಾಗಿ 5 ಸಾವಿರ ರೂ. ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮನೆಗಳಿಗೆ ಆಗಿರುವ ಹಾನಿಯ ಪ್ರಮಾಣದ ನಿರ್ಧರಣೆಯ ಬಗ್ಗೆ ಎಂಜಿನಿಯರುಗಳನ್ನು ತಕ್ಷಣವೇ ಕಳುಹಿಸಿ 48 ಗಂಟೆಯೊಳಗೆ ವರದಿ ತರಿಸಿಕೊಂಡು, ವಿಳಂಬ ಇಲ್ಲದಂತೆ ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ನಿಯಮಗಳ ರೀತ್ಯ ಪರಿಹಾರ ನೀಡಲು ಕ್ರಮ ವಹಿಸುವಂತೆ ಆದೇಶಿಸಿದ್ದಾರೆ.
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗೆ ಹಾನಿಯಾಗಿದ್ದು, ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಬೇಕು. ಸೇತುವೆಗಳು ಕುಸಿದು ರಸ್ತೆ ಸಂಪರ್ಕ ಕಳೆದುಕೊಂಡಿರುವ ಗ್ರಾಮಗಳಿಗೆ ತುರ್ತಾಗಿ ಸಂಪರ್ಕ ಕಲ್ಪಿಸಬೇಕು. ಪುನರ್ ನಿರ್ಮಾಣ ಮಾಡುವ ಅಗತ್ಯ ಇರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಕಳಪೆ ಕಾಮಗಾರಿಯಿಂದ ರಸ್ತೆ, ಸೇತುವೆ ಇತ್ಯಾದಿ ಹಾಳಾಗಿದ್ದರೆ ಆ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ಇಂದು ಸಂಜೆ ಅಥವಾ ರಾತ್ರಿಯೊಳಗೆ ವಿದ್ಯುತ್ ಸಂಪರ್ಕಗಳ ಪುನರ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಆಗದಿದ್ದರೆ ವಾಟ್ಸ್ ಆಪ್ ಮೂಲಕ ಮಾಹಿತಿ ನೀಡಬೇಕು ಎಂದು ವಿದ್ಯುತ್ ಸರಬರಾಜು ಇಲಾಖೆಗೆ ಸೂಚಿಸಿದ್ದಾರೆ.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸೂಚನೆ :
ಪ್ರವಾಹ ಪರಿಸ್ಥಿತಿ ಉಂಟಾದಾಗ, ಮನೆಗಳಿಗೆ ನೀರು ನುಗ್ಗಿದಾಗ ನಾನಾ ಬಗೆಯ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಔರಾದ್, ಕಮಲನಗರ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಮಳೆ ನೀರು ನುಗ್ಗಿರುವ ಪ್ರದೇಶಗಳಲ್ಲಿ ಸಮುದಾಯ ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಸೂಚಿಸಿದ ಅವರು, ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಯಾವುದೇ ಆಸ್ಪತ್ರೆ ಸೋರುತ್ತಿದ್ದರೆ, ಗೋಡೆ ಶಿಥಿಲವಾಗಿದ್ದರೆ ರೋಗಿಗಳನ್ನು ಸ್ಥಳಾಂತರಿಸಬೇಕು ಎಂದು ಅವರು ಹೇಳಿದ್ದಾರೆ.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಜಿಲ್ಲಾ ವೈದ್ಯಾಧಿಕಾರಿ ಡಾ.ನಿರಗುಡೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.







