ರವಿಂದ್ರ ಸ್ವಾಮಿ ವಿರುದ್ಧ ನ್ಯಾಯಾಲಯದ ತೀರ್ಪು; ಡಿಎಸ್ಎಸ್ ಹೋರಾಟಕ್ಕೆ ಸಂದ ಜಯ : ಮಾರುತಿ ಬೌದ್ದೆ

ಬೀದರ್ : ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ರವಿಂದ್ರ ಸ್ವಾಮಿ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದು, ಡಿಎಸ್ಎಸ್ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ ಅವರು ತಿಳಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತ ಜಂಗಮ ಜಾತಿಗೆ ಸೇರಿದವರಾದ ಜಿಲ್ಲೆಯ ನಿವಾಸಿ ರವಿಂದ್ರ ಸ್ವಾಮಿ ಅವರು 2016 ರಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಬೇಡ ಜಂಗಮದ ಪ್ರಮಾಣ ಪತ್ರ ನೀಡಬೇಕು ಎಂದು ಅರ್ಜಿ ಸಲ್ಲಿಸಿದರು. ಆದರೆ ಅವರ ಅರ್ಜಿ ತಿರಸ್ಕಾರ ಮಾಡಲಾಗಿತ್ತು. ನಂತರದಲ್ಲಿ ಲಂಚ ನೀಡಿ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಅವರನ್ನು ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ರವಿಂದ್ರ ಸ್ವಾಮಿ ತಂದೆ ಕಲ್ಲಯ್ಯ ಸ್ವಾಮಿ ಕಾನೂನಿನ ವಿರುದ್ಧವಾಗಿ ಸುಳ್ಳು ದಾಖಲೆ ಸೃಷ್ಟಿಸಿ ತಹಶೀಲ್ದಾರ್ ಅವರಿಗೆ ಪದೆ ಪದೆ ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದರು. ಇವರ ಅರ್ಜಿ ತಿರಸ್ಕಾರಗೊಂಡರೂ ಸಹ ಅವರು ಅರ್ಜಿ ಸಲ್ಲಿಸುವುದು ಮುಂದುವರೆಸಿದ್ದರು. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಹಾಗೂ ತಹಸೀಲ್ದಾರ್ ಅವರ ಮೇಲೆ ಒತ್ತಡ ಹಾಕಿ 2019 ರಲ್ಲಿ ಲಿಂಗಾಯತ ಜಂಗಮರಾಗಿರುವ ರವಿಂದ್ರ ಸ್ವಾಮಿ ಅವರು ಪರಿಶಿಷ್ಟ ಜಾತಿಯಲ್ಲಿ ಬರುವ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದರು ಎಂದು ತಿಳಿಸಿದರು.
ಈ ವಿಷಯವು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಗಮನಕ್ಕೆ ಬಂದಾಗ ಇಲ್ಲಿಯ ಸಹಾಯಕ ಆಯುಕ್ತರಿಗೆ ಲಿಖಿತ ದೂರು ನೀಡಿ, ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಇವಾಗ ನ್ಯಾಯಾಲಯವೇ ಅದನ್ನು ತಿರಸ್ಕಾರ ಮಾಡಿದೆ. ಒಂಬತ್ತು ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸುವ ಮೂಲಕ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಶಸ್ಸು ಕಂಡಿದೆ ಎಂದರು.
ದಲಿತ ಮುಖಂಡ, ಚಿಂತಕ ಪ್ರೊ.ವಿಠಲದಾಸ್ ಪ್ಯಾಗೆ ಅವರು ಮಾತನಾಡಿ, ಲಿಂಗಾಯತ ಜಂಗಮ ಜಾತಿಗೆ ಸೇರಿದವರು ಪರಿಶೀಷ್ಟ ಜಾತಿಯಲ್ಲಿ ಬರುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆಯುವಂತಿಲ್ಲ ಎಂಬ ಐತಿಹಾಸಿಕ ತೀರ್ಪು ಬಂದಿದೆ. 70 ಪುಟಗಳ ಐತಿಹಾಸಿಕ ತೀರ್ಪು ಗುಲ್ಬರ್ಗಾ ಪೀಠವು ಪ್ರಕಟಿಸಿದೆ. ಇವರು ಶೋಷಿತ ಸಮಾಜದ ಹಕ್ಕುಗಳು ಕಬಳಿಸುವ ಹುನ್ನಾರಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ಐತಿಹಾಸಿಕ ತೀರ್ಪು ಮುಂದಿನ ಪೀಳಿಗೆಗೆ, ಸರ್ಕಾರದ ಇಲಾಖೆಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಮಾರ್ಗ ಸೂಚಿಯಾಗಿದೆ ಎಂದು ಹೇಳಿದರು.
1961 ರಲ್ಲಿ ಬೇಡ ಜಂಗಮರು ಬರೀ 16 ಜನ ಮಾತ್ರ ಇದ್ದರು. 1971 ರಲ್ಲಿ ಅವರ ಸಂಖ್ಯೆ 335 ಇತ್ತು. ಆದರೆ 1981 ರಲ್ಲಿ ಅವರ ಜನಸಂಖ್ಯೆ 27 ಸಾವಿರಕ್ಕೆ ಹೆಚ್ಚಳವಾಗಿದೆ. ಇದು ಆಶ್ಚರ್ಯಕರ ಸಂಗತಿಯಾಗಿದೆ. ಲಿಂಗಾಯತ ಜಂಗಮರೆಲ್ಲ ಬೇಡ ಜಂಗಮರೆಂದು ಜಾತಿ ಪ್ರಮಾಣ ಪತ್ರ ಪಡೆದು, ಬಡವರಿಗೆ, ಪರಿಶಿಷ್ಟ ಜಾತಿಯ ಜನರಿಗೆ ಮೋಸ ಮಾಡುತ್ತಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಅರುಣ್ ಪಟೇಲ್, ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ್ ವಾಘಮಾರೆ, ಹಿರಿಯ ಮುಖಂಡ ಡಾ.ಕಾಶಿನಾಥ್ ಚಲ್ವಾ, ವಿಜಯಕುಮಾರ್ ಗಾಯಕವಾಡ್, ವಿನೋದ್ ಬಂದಗೆ ಹಾಗೂ ಸುಧಾಕರ್ ಸೇರಿದಂತೆ ಇತರರು ಇದ್ದರು.