ದೇವನಹಳ್ಳಿ ರೈತ ಹೋರಾಟಗಾರರ ಬಿಡುಗಡೆಗೊಳಿಸಲು ಸಿಪಿಐ(ಎಂ) ಒತ್ತಾಯ

ಬೀದರ್ : ದೇವನಹಳ್ಳಿ ರೈತ ಹೋರಾಟಗಾರರನ್ನು ಬಿಡುಗಡೆಗೊಳಿಸಿ, ಭೂ ಸ್ವಾಧಿನ ಪ್ರಕ್ರಿಯೆಯಿಂದ ದೂರ ಸರಿಯಬೇಕು ಎಂದು ಸಿಪಿಐ(ಎಂ) ಬೀದರ್ ಜಿಲ್ಲಾ ಸಂಘಟನಾ ಸಮಿತಿ ಒತ್ತಾಯಿಸಿ ಹುಮನಾಬಾದ್ ನಗರದಲ್ಲಿ ಪ್ರತಿಭಟನೆ ನಡೆಸಿತು.
ಕಳೆದ 1,177 ದಿನಗಳಿಂದ ಭೂ ಸ್ವಾಧಿನವನ್ನು ವಿರೋಧಿಸಿ ದೇವನಹಳ್ಳಿ ಮತ್ತು ಸುತ್ತಲಿನ 13 ಗ್ರಾಮಗಳ ರೈತರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರು. ಇವರ ಈ ಹೋರಾಟಕ್ಕೆ ಸರಕಾರ ಕಿವಿಗೋಡದ ಕಾರಣ, ಜೂ. 25 ರಂದು ಸಂಯುಕ್ತ ಹೋರಾಟ ಕರ್ನಾಟಕವು ಬೆಂಬಲ ಸೂಚಿಸಿತ್ತು. ಈ ಪ್ರತಿಭಟನೆಯನ್ನು ಬೆಂಬಲಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತಾರು ಸಂಘಟನೆಯ ಸಾವಿರಾರು ಜನ ಸೇರಿದ್ದರು. ಅವರ ಪ್ರತಿಭಟನೆಗೆ ಅವಕಾಶ ನೀಡದೆ ಅವರನ್ನು ಬಂಧಿಸಿದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ.
ಸರಕಾರ ಭೂ ಸ್ವಾಧೀನ ಆದೇಶ ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ತೀರ್ಮಾನಿಸಿದ್ದರು. ಪ್ರತಿಭಟನೆಯು ಇಡೀ ದಿನ ಶಾಂತಿಯುತವಾಗಿ ನಡೆದಿತ್ತು. ಆದರೆ ಸಾಯಂಕಾಲ ಸುಮಾರು 5 ಗಂಟೆಗೆ ಪೊಲೀಸರು ಬಂದು ಇಲ್ಲಿ ಪ್ರತಿಭಟನೆ ಮಾಡುವುದಕ್ಕೆ ಅವಕಾಶವಿಲ್ಲ. ನೀವು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿ ಎಂದು ಹೇಳುತ್ತಾ, ವೇದಿಕೆಯಲ್ಲಿ ಇರುವವರನ್ನು ಎಳೆದಾಡಿ ಬಂಧಿಸಿದ್ದು ಖಂಡನಿಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಬಂಧನಕ್ಕೆ ಒಳಗಾದವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಹಾಗೆಯೇ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಅಂಬುಬಾಯಿ ಮಾಳಗೆ, ಸದಸ್ಯರಾದ ಶ್ರೀದೇವಿ ಚುವುಡೇ, ಪ್ರಭು ಸಂತೋಷಕರ್, ಶಶಿಕಾಂತ್ ಡಾಂಗೆ, ಬಸವರಾಜ್ ಮಾಳಗೆ ಹಾಗೂ ರೇಷ್ಮಾ ಹಂಸರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.







