ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಲಿಂಗ ಪರೀಕ್ಷೆ ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು : ಡಾ.ಧ್ಯಾನೇಶ್ವರ್ ನಿರಗುಡೆ

ಬೀದರ್ : ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಯಾವುದೇ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಪ್ರಸವಪೂರ್ವ ಲಿಂಗ ಪರೀಕ್ಷೆ ವಿಧಾನ ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ್ ನಿರಗುಡೆ ತಿಳಿಸಿದರು.
ಇಂದು ಡಿ ಎಚ್ ಓ ಕಚೇರಿ ಸಭಾಂಗಣದಲ್ಲಿ ಜರುಗಿದ ಪಿ.ಸಿ. ಹಾಗೂ ಪಿ.ಎನ್.ಡಿ.ಟಿ. ಕಾಯ್ದೆ 1994 (ಗರ್ಭಧಾರಣಾ ಹಾಗೂ ಪ್ರಸನ ಪೂರ್ವ ಪತ್ತೆ ತಂತ್ರ ವಿಧಾನಗಳ ಅಧಿನಿಯಮ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂರು ತಿಂಗಳಿಗೊಮ್ಮೆ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಿಗೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ ಡೊಂಗ್ರೆ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತದೆ. ಪ್ರತಿ ಸ್ಕ್ಯಾನಿಂಗ್ ಕೇಂದ್ರವು ಅಗತ್ಯ ದಾಖಲಾತಿ ಇಡಬೇಕು. ಒಟ್ಟು 72 ತಪಾಸಣಾ ಕೇಂದ್ರಗಳಲ್ಲಿ ಗರ್ಭ ತಪಾಸಣೆ ನಡೆಸಲಾಗುತ್ತಿದೆ. ಗರ್ಭಕ್ಕೆ ಯಾವುದಾದರೂ ಲೋಪದೋಷ ಇರುವ ಬಗ್ಗೆ ತಪಾಸಣೆಗೆ ಒಳಪಡುವ ಮಹಿಳೆಯು ನಾಲ್ಕು ಕಾಲಂ ರಿಜಿಸ್ಟರ್, ಬಿಲ್ ಬುಕ್ ಹಾಗೂ ಎಲ್ಲ ವಿವರದ ರಿಜಿಸ್ಟರ್ ಕಡ್ಡಾಯವಾಗಿ ಇಡಬೇಕಾಗುತ್ತದೆ. ಕೆಲವೆಡೆ ಸಣ್ಣ ಪಟ್ಟ ಲೋಪದೋಷ ಕಂಡುಬಂದಿವೆ. ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಅನೇಕ ಲಂಬಾಣಿ ತಾಂಡಾಗಳಿದ್ದು, ಬಗದಲ್, ಹೊನ್ನಿಕೇರಿಯಂಥಹ ತಾಂಡಾಗಳಲ್ಲಿ ಗಂಡು, ಹೆಣ್ಣಿನ ಅನುಪಾತ ತೀರ ಕಡಿಮೆ ಇದೆ. ಹೆಣ್ಣು ಅನುಪಾತ ತೀರ ಕುಸಿತದ ಬಗ್ಗೆ ನಿಗಾ ವಹಿಸಿ ಮಾಹಿತಿ ಸಂಗ್ರಹಿಸಬೇಕು ಎಂದು ಜಿಲ್ಲಾ ತಪಾಸಣಾ ಹಾಗೂ ಪರಿಶೀಲನಾ ಸಮಿತಿ ಮತ್ತು ಸಲಹಾ ಸಮಿತಿ ಸದಸ್ಯ ಉಮೇಶ ಪಾಂಡ್ರೆ ಅವರು ಸಭೆಯ ಗಮನಕ್ಕೆ ತಂದರು.
ಆಶಾ ಕಾರ್ಯಕರ್ತೆಯರು ಪ್ರತಿ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರ ಬಗ್ಗೆ ನಿಗಾವಹಿಸಬೇಕು. ಭ್ರೂಣಹತ್ಯೆ, ಲಿಂಗ ತಪಾಸಣೆ ನಿಷೇಧ ಬಗ್ಗೆ ಗರ್ಭಿಣಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಬೇಕು ಎಂದು ಡಿ ಎಚ್ ಓ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಬಗ್ಗೆ ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ, ವಿಜ್ಞಾನ ಪರಿಷತ್ ನಿಂದ ಚೈತನ್ಯಶ್ರೀ ಪ್ರಶಸ್ತಿ ಪಡೆದ ಡಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾಗಿರುವ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಆರತಿ ಕೃಷ್ಣಮೂರ್ತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ.ಸೋಹೆಲ್, ರೆಡಿಯೋಲಾಜಿಸ್ಟ್, ಡಾ.ಅಮಿತ್ ಶಾಹ, ಮಲಿಕಾರ್ಜುನ್, ಮಂಜುಳಾ ಮಾಳೆ, ವಿನಯಕುಮಾರ್ ಮಾಳಗೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.







