ಸೈಬರ್ ವಂಚನೆ : ಅಂಗನವಾಡಿ ಫಲಾನುಭವಿಗಳೇ ಎಚ್ಚರ!

ಬೀದರ್ : ಭಾಲ್ಕಿ ತಾಲ್ಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ಸೈಬರ್ ವಂಚಕರು ಕರೆ ಮಾಡುವ ಮೂಲಕ ವಂಚಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳ ಫಲಾನುಭವಿಗಳು ಎಚ್ಚರದಿಂದ ಇರಬೇಕು ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಶಿಶು ಅಭಿವೃದ್ಧಿ ಯೋಜನೆ ಭಾಲ್ಕಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾಲ್ಕಿ ತಾಲ್ಲೂಕಿನ ಅಂಗನವಾಡಿ ಫಲಾನುಭವಿಗಳಾದ ಗರ್ಭಿಣಿ, ಬಾಣಂತಿಯರಿಗೆ ಸೈಬರ್ ವಂಚಕರು 6383847603, 9241381922, 8252398990 ಮೊಬೈಲ್ ಸಂಖ್ಯೆಯಿಂದ ಕರೆ ಮಾಡುತ್ತಿದ್ದಾರೆ. ಕರೆ ಮಾಡಿ ನಾವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕರೆ ಮಾಡುತ್ತಿರುತ್ತೇವೆ. ತಾವು ತಮ್ಮ ಫೋನ್ ಪೇ ಅಥವಾ ಗೂಗಲ್ ಪೇ ಸಂಖ್ಯೆಯನ್ನು ನೀಡಿದರೆ ತಮಗೆ ತಮ್ಮ ಖಾತೆಯಲ್ಲಿ 12 ಸಾವಿರ ರೂ. ಪಾವತಿಸುತ್ತೇವೆ ಎಂದು ತಿಳಿಸಿ ಫಲಾನುಭವಿಗಳ ಖಾತೆಯಿಂದ ದುಡ್ಡನ್ನು ಸೆಳೆಯುತ್ತಿರುತ್ತಾರೆ. ಹಾಗಾಗಿ ಫಲಾನುಭವಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಫಲಾನುಭವಿಗಳು ಜಾಗೃತರಾಗಿರಬೇಕು. ಅನಾಮಿಕ ಕರೆಗಳು ಬಂದರೆ ಯಾವುದೇ ಕಾರಣಕ್ಕೂ ತಮ್ಮ ಮಾಹಿತಿಯನ್ನು ನೀಡಬಾರದು. ಇಂತಹ ಅನಾಮಿಕ ಕರೆ ಬಂದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.







