ಬೀದರ್ ನಲ್ಲಿ ಪತ್ರಕರ್ತರ 40ನೇ ರಾಜ್ಯ ಸಮ್ಮೇಳನ ನಡೆಸಲು ನಿರ್ಧಾರ

ಬೀದರ್ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಬೀದರ್ ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಜಿಲ್ಲಾ ಕಾರ್ಯನಿರತ ಸಂಘದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಈ ಬಗ್ಗೆ ನಿರ್ಣಯಿಸಲಾಯಿತು.
ಸಭೆಯಲ್ಲಿ ಶಿವಾನಂದ ತಗಡೂರು ಅವರು ಮಾತನಾಡಿ, ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ 40ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲು ಒಪ್ಪಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಮೊದಲು ಈ ಸಮ್ಮೇಳನ ರಾಯಚೂರಿನಲ್ಲಿ ನಡೆಸಲು ತಿರ್ಮಾನಿಸಲಾಗಿತ್ತು. ಆದರೆ ಬೀದರ್ ಜಿಲ್ಲೆಯ ಹಿರಿಯ ಪತ್ರಕರ್ತರ ಕೋರಿಕೆ ಮೇರೆಗೆ ಅದನ್ನು ಬೀದರ್ ಜಿಲ್ಲೆಗೆ ನೀಡಲಾಗಿದೆ. ಸಂಪ್ರದಾಯದಂತೆ ಮುಖ್ಯಮಂತ್ರಿಗಳು ಸಮಾರಂಭ ಉದ್ಘಾಟಿಸುವರು. ಉಪಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಈ ಭಾಗದ ಸಂಸದರು, ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ನಾಡಿನ ಹಾಗೂ ರಾಷ್ಟ್ರ ಮಟ್ಟದ ಚಿಂತನಕಾರರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಲಾಗುವುದು ಎಂದು ಹೇಳಿದರು.
ಸಾಂಸ್ಕೃತಿಕ ನಾಯಕ ಬಸವಣ್ಣನವರ ಕರ್ಮಭೂಮಿಯಾಗಿರುವ ಈ ಪೂಣ್ಯ ಭೂಮಿಯಲ್ಲಿ 2006ರಲ್ಲಿ 29ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಅದರ ನಂತರ 20 ವರ್ಷಗಳ ಬಳಿಕ ಮತ್ತೆ ಇಲ್ಲಿ ಸಮ್ಮೇಳನ ಆಯೋಜಿಸುವ ಅವಕಾಶ ಒದಗಿ ಬಂದಿದೆ ಎಂದ ಅವರು, ಸಮ್ಮೇಳನ ಯಶಸ್ವಿಗಾಗಿ ಸ್ಮರಣ ಸಂಚಿಕೆ ರಚನೆ, ವಸತಿ, ಸಂಸ್ಕೃತಿ, ವೇದಿಕೆ, ಸಾರಿಗೆ, ಆರ್ಥಿಕ ಇತ್ಯಾದಿಗಳಿಗೆ ಸಮಿತಿಗಳನ್ನು ರಚಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರನ್ನು ಸಭೆಗೆ ಅವ್ಹಾನಿಸಿ ಅವರಿಗೆ ಸಮ್ಮೇಳನದ ಸ್ವಾಗತ ಸಮಿತಿಯ ಜವಾಬ್ದಾರಿ ವಹಿಸಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಬಾಬು ವಾಲಿ, ಮಲ್ಲಿಕಾರ್ಜುನ್ ಬಿರಾದಾರ್, ಬಸವರಾಜ್ ಕಾಮಶೆಟ್ಟಿ, ಅಶೋಕಕುಮಾರ್ ಕರಂಜಿ, ಅಪ್ಪಾರಾವ ಸೌದಿ ಹಾಗೂ ಶಿವಕುಮಾರ್ ಸ್ವಾಮಿ ಸೇರಿದಂತೆ ಜಿಲ್ಲೆಯ ಹಲವಾರು ಪತ್ರಕರ್ತರು ಇದ್ದರು.







