ಬೀದರ್ ಮಹಾರಾಷ್ಟ್ರಕ್ಕೆ ಸೇರಬೇಕೆಂದು ವೀಡಿಯೋ ಮಾಡಿದ ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹ

ಭಾಲ್ಕಿ: ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೀದರ್ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹೇಳಿರುವುದಾಗಿ ಆರೋಪಿಸಲಾದ ಯುವಕನೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೊಯ್ಸಳ ವೇದಿಕೆಯ ಅಧ್ಯಕ್ಷ ಸಂತೋಷ್ ನಾಟೀಕರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಬುಧವಾರ ಸಲ್ಲಿಸಿದ ಮನವಿಯಲ್ಲಿ, ಕನ್ನಡಿಗರು ಮತ್ತು ಮರಾಠರು ಸೌಹಾರ್ದತೆಯಿಂದ ಬದುಕುತ್ತಿರುವ ಬೀದರ್ ಜಿಲ್ಲೆಯಲ್ಲಿ ಭಾಷೆ ಹಾಗೂ ಸಮುದಾಯದ ಹೆಸರಿನಲ್ಲಿ ವೈಮನಸ್ಸು ಮೂಡಿಸುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ತಿಳಿಸಲಾಗಿದೆ.
ವಿಡಿಯೊದಲ್ಲಿರುವ ಯುವಕನ ಹೇಳಿಕೆಗಳಿಂದ ಜಿಲ್ಲೆಯ ಶಾಂತಿ, ರಾಜ್ಯದ ಏಕತೆ ಹಾಗೂ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಯಾವುದೇ ಅನ್ಯಾಯವಾಗಿದ್ದರೆ ಕಾನೂನುಬದ್ಧವಾಗಿ ನ್ಯಾಯ ಪಡೆಯಬಹುದು. ಆದರೆ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಹಾಗೂ ರಾಜ್ಯದ ಏಕತೆಗೆ ಧಕ್ಕೆ ತರುವಂತಹ ಹೇಳಿಕೆಗಳು ಖಂಡನೀಯ. ಆರೋಪಗಳು ಸಾಬೀತಾದಲ್ಲಿ ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನಿನಲ್ಲಿ ಅವಕಾಶವಿದ್ದರೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾಗಿದೆ.






