ಬಸವಕಲ್ಯಾಣ | ತಾಲೂಕು ಪಂಚಾಯತ್ ತಾಂತ್ರಿಕ ಸಂಯೋಜಕರನ್ನು ವರ್ಗಾವಣೆ ಮಾಡುವಂತೆ ಜನರ ಧ್ವನಿ ಸಂಘಟನೆ ಆಗ್ರಹ

ಬೀದರ್ : ಬಸವಕಲ್ಯಾಣ ತಾಲೂಕು ಪಂಚಾಯತ್ ತಾಂತ್ರಿಕ ಸಂಯೋಜಕ ಅಮರನಾಥ್ ಪಾಟೀಲ್ ಅವರನ್ನು ವರ್ಗಾವಣೆ ಮಾಡುವಂತೆ ಜನರ ಧ್ವನಿ ಸಂಘಟನೆ ಆಗ್ರಹಿಸಿದೆ.
ಬಸವಕಲ್ಯಾಣ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗೆ ಈ ಕುರಿತು ಜನರ ಧ್ವನಿ ಸಂಘಟನೆ ಮನವಿ ಪತ್ರವನ್ನು ಸಲ್ಲಿಸಿದೆ. ತಾಲೂಕು ಪಂಚಾಯತ್ ತಾಂತ್ರಿಕ ಸಂಯೋಜಕ ಅಮರನಾಥ್ ಪಾಟೀಲ್ ಅವರು ಸಾರ್ವಜನಿಕರ ಸಮಸ್ಯೆ ಸ್ಪಂದಿಸುತ್ತಿಲ್ಲ. ಸಾರ್ವಜನಿಕರಿಗೆ ಏಕವಚನದಲ್ಲಿಯೇ ನಿಂದನೆ ಮಾಡುತ್ತಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಕರ್ತವ್ಯದ ಸಮಯದಲ್ಲಿ ಅವರು ಖಾಸಗಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದು, ಸರಿಯಾದ ಕೆಲಸ ಕಾರ್ಯಗಳು ನಡೆಯದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದಾಗಿ ತಕ್ಷಣವೇ ಅಮರನಾಥ್ ಪಾಟೀಲ್ ಅವರನ್ನು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜನರ ಧ್ವನಿ ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಜನರ ಧ್ವನಿ ಸಂಘಟನೆ ತಾಲೂಕು ಅಧ್ಯಕ್ಷ ಮಾರುತಿ ಡಿ.ಕಾಂಬಳೆ, ಪ್ರಧಾನ ಕಾರ್ಯದರ್ಶಿ ಸೋಮನಾಥ್ ಮೂಡಬೇಕರ್, ಉಪಾಧ್ಯಕ್ಷ ರತ್ನದೀಪ್ ಗಾಯಕವಾಡ್, ಕಾರ್ಯದರ್ಶಿ ಅವಿನಾಶ್ ಫುಲಬನೆ, ಸದಸ್ಯರಾದ ವಿಜಯ್ ಕಾಂಬಳೆ, ಸಲಾಂ ಬಾರಾದಿ ಹಾಗೂ ಅನಿಲ್ ಗಾಯಕವಾಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





