Basavakalyan | ಮರಾಠಿ, ಉರ್ದು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಆಗ್ರಹ

ಬಸವಕಲ್ಯಾಣ: ರಾಜ್ಯ ಸರ್ಕಾರ ಹೊರಡಿಸಿರುವ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಮರಾಠಿ ಹಾಗೂ ಉರ್ದು ಶಿಕ್ಷಕರ ನೇಮಕಾತಿಯನ್ನು ಕೈಬಿಡಲಾಗಿದೆ ಎಂದು ಆರೋಪಿಸಿ, ತಕ್ಷಣವೇ ಎರಡೂ ಮಾಧ್ಯಮಗಳ ಶಿಕ್ಷಕರ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಗಾಂಧಿ ವೃತ್ತದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿಯಲ್ಲಿ ಸಕಲ ಮರಾಠಾ ಸಮಾಜ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ನೂರಾರು ಜನರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರ‍್ಯಾಲಿಯು ಅಂಬೇಡ್ಕರ್ ವೃತ್ತದವರೆಗೆ ಸಾಗಿತು.
ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಮರಾಠಿ ಮತ್ತು ಉರ್ದು ಮಾಧ್ಯಮದ ಶಿಕ್ಷಕರ ನೇಮಕಾತಿಯನ್ನು ಕೈಬಿಡಲಾಗಿದೆ ಎಂದು ದೂರಿದರು.
ರಾಜ್ಯದ ಮರಾಠಿ ಹಾಗೂ ಉರ್ದು ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ, ಅವುಗಳ ಸಮರ್ಪಕ ಮಾಹಿತಿ ಪಡೆದುಕೊಳ್ಳದೆ ನೇಮಕಾತಿ ಅಧಿಸೂಚನೆಯಿಂದ ಈ ಸಮುದಾಯಗಳನ್ನು ದೂರ ಇಡಲಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿರುವ ಮರಾಠಿ ಹಾಗೂ ಉರ್ದು ಮಾಧ್ಯಮದ ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಕುರಿತು ಸಮಗ್ರ ಮಾಹಿತಿ ಪಡೆದು, ವಿಷಯವಾರು ಹುದ್ದೆಗಳನ್ನು ಪರಿಗಣಿಸಿ ಪ್ರಸ್ತುತ ಅಧಿಸೂಚನೆಯನ್ನು ತಿದ್ದುಪಡಿ ಮಾಡಬೇಕು. ಕಾನೂನಿನ ಪ್ರಕಾರ ನ್ಯಾಯಯುತವಾಗಿ ಮರಾಠಿ ಹಾಗೂ ಉರ್ದು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಗಡಿ ಭಾಗದಲ್ಲಿರುವ ಮರಾಠಿ ಭಾಷಿಕರು ಹಾಗೂ ರಾಜ್ಯದ ವಿವಿಧೆಡೆ ವಾಸಿಸುವ ಉರ್ದು ಭಾಷಿಕ ಸಮುದಾಯದ ಶಿಕ್ಷಕರ ಹುದ್ದೆಗಳ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪದ್ಮಾಕರ್ ಪಾಟೀಲ್, ಅನೀಲ್ ಭೂಸಾರೆ, ತಾತ್ಯಾರಾವ್ ಪಾಟೀಲ್, ಸದಾನಂದ್ ಬಿರಾದರ್ ಹಾಗೂ ಜ್ಞಾನೊಬಾ ನಿಟ್ಟುರೆ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.






