ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ವಿತರಿಸಲು ಕ್ರಮವಹಿಸಬೇಕು : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ವಿತರಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2025ರ ಮುಂಗಾರು ಹಂಗಾಮಿನ ರಸಗೊಬ್ಬರಗಳ ದಾಸ್ತಾನು ಹಾಗೂ ಸರಬರಾಜು ಕುರಿತು ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2025ರ ಮುಂಗಾರು ಹಂಗಾಮಿಗೆ ಸೋಯಾ ಮತ್ತು ಅವರೆ ಬೀಜ ಜಿಲ್ಲೆಗೆ ಹಂಚಿಕೆಯಾಗಿರುವ ಪ್ರಮಾಣವು ಕಡಿಮೆಯಾಗಿದ್ದು, 1 ಲಕ್ಷ 20 ಸಾವಿರ ಕ್ವಿಂಟಲ್ ಗಳಷ್ಟು ದಾಸ್ತಾನಿಕರಿಸಲು ಕ್ರಮವಹಿಸಬೇಕು ಹಾಗೂ ಹೆಚ್ಚುವರಿ ಪ್ರಮಾಣ ಹಂಚಿಕೆ ಮಾಡುವಂತೆ ಕೃಷಿ ಆಯುಕ್ತರಿಗೆ ಪತ್ರ ಬರೆಯಲು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಮೇ.26 ರಿಂದ ಬಿತ್ತನೆ ಬೀಜಗಳ ವಿತರಣೆ ಕಾರ್ಯವು ಪ್ರಾರಂಭಿಸಬೇಕು. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಕಾಲದಲ್ಲಿ ರೈತರಿಗೆ ಕೊರತೆಯಾಗದಂತೆ ವಿತರಿಸಲು ಕ್ರಮವಹಿಸಬೇಕು ಎಂದು ತಿಳಿಸಿದ ಅವರು, ಸೂಕ್ತ ಪೋಲಿಸ್ ಬಂದೋಬಸ್ತ್ ಕಾನೂನು ಪರಿಪಾಲನೆಯನ್ನು ಅನುಸರಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕರು ಪಿಪಿಟಿ ಪ್ರಸೆಂಟೇಶನ್ ಮೂಲಕ ಕೃಷಿ ಇಲಾಖೆಯ ಸಾಮಾನ್ಯ ಮಾಹಿತಿ, 2024-25ನೇ ಸಾಲಿನ ಜಿಲ್ಲೆಯ ಮಳೆ ವಿವರ, ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳ ಬಿತ್ತನೆ ಕ್ಷೇತ್ರ, ಬಿತ್ತನೆ ಬೀಜಗಳ ವಿತರಣಾ ಪ್ರಮಾಣ, ಹೆಚ್ಚುವರಿ ವಿತರಣಾ ಕೇಂದ್ರಗಳ ವಿವರ, ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಜಿಲ್ಲೆಯ ಪ್ರಮುಖ ಬೆಳೆಗಳ ಬಿತ್ತನೆ ಕ್ಷೇತ್ರ ಗುರಿ, ಜಿಲ್ಲೆಯ ಬಿತ್ತನೆ ಬೀಜಗಳ ಕಾರ್ಯಕ್ರಮ, ಬಿತ್ತನೆ ಬೀಜಗಳ ದಾಸ್ತಾನು ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಚ್ಚುವರಿ ವಿತರಣಾ ಕೇಂದ್ರಗಳು, ಮುಂಗಾರು ಹಂಗಾಮಿನ ರಸಗೊಬ್ಬರ ಮಾಹೆವಾರು ಬೇಡಿಕೆ ಪ್ರಮಾಣ ಮತ್ತು ಪ್ರಸ್ತುತ ದಾಸ್ತಾನು ಕುರಿತು ಮಾನ್ಯ ಜಿಲ್ಲಾಧಿಕಾರಿಯವರಿಗೆ ಹಾಗೂ ಸಭೆಯ ಸದಸ್ಯರಿಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಬಸವಕಲ್ಯಾಣದ ಉಪ ಕೃಷಿ ನಿರ್ದೇಶಕರು-2 ಹಾಗೂ ತಾಲ್ಲೂಕು ಮಟ್ಟದ ಅಧಿಕರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.







