ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಧಮ್ಮವೇ ಪ್ರೇರಣೆ : ಈಶ್ವರ್ ಖಂಡ್ರೆ
12ನೇ ವರ್ಷದ ಧಮ್ಮರಥ ಮಹಾರ್ಯಾಲಿಗೆ ಚಾಲನೆ

ಹುಲಸೂರು: ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಅಳವಡಿಸಿಕೊಳ್ಳಲು ಧಮ್ಮವೇ ಪ್ರೇರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟರು.
ಜಮಖಂಡಿಯಲ್ಲಿ 70ನೇ ಧಮ್ಮಚಕ್ರ ಪರಿವರ್ತನಾ ದಿನಾಚರಣೆಯ ಅಂಗವಾಗಿ ಲೋಕಜಾಗೃತಿ ಭೀಮಜ್ಯೋತಿ ವಿಚಾರ ಮಂಚದ ವತಿಯಿಂದ ಬುಧವಾರ ಆಯೋಜಿಸಿದ್ದ 12ನೇ ವರ್ಷದ ಧಮ್ಮರಥ ಮಹಾರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಕ್ಕೆ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯ ಹರಿಕಾರರಾಗಿದ್ದಾರೆ. ಅವರು ಸಾರಿದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಹೋದರತ್ವದ ತತ್ವಗಳು ಸಮಾಜದ ಪ್ರಗತಿಗೆ ಮಾರ್ಗದರ್ಶಿಯಾಗಿವೆ. ಗೌತಮ ಬುದ್ಧರ ಧಮ್ಮದ ಸಂದೇಶವು ಶಾಂತಿ, ಕರುಣೆ ಮತ್ತು ಮಾನವೀಯತೆಯನ್ನು ಬೆಳೆಸುತ್ತದೆ. ಮಹನೀಯರ ಹಾಗೂ ದಾರ್ಶನಿಕರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಧಮ್ಮಚಕ್ರ ಪರಿವರ್ತನಾ ದಿನಾಚರಣೆಯು ಡಾ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸ್ಮರಿಸುವುದರ ಜತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ವದ ಸಂದರ್ಭವಾಗಿದೆ. ಇಂತಹ ಕಾರ್ಯಕ್ರಮಗಳು ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಲುಪಿಸುವುದರೊಂದಿಗೆ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುತ್ತವೆ ಎಂದು ತಿಳಿಸಿದರು.
ಲೋಕಜಾಗೃತಿ ಭೀಮಜ್ಯೋತಿ ವಿಚಾರ ಮಂಚದ ಸಂಸ್ಥಾಪಕ ಅಧ್ಯಕ್ಷ ನಾಗನಾಥ್ ಬನಸೋಡೆ ಮಾತನಾಡಿ, ಭೀಮಜ್ಯೋತಿ ಮಹಾರ್ಯಾಲಿಯು ಜಮಖಂಡಿಯಿಂದ ಆರಂಭವಾಗಿ ವಾಂಜರಖೇಡ, ತೂಗಾಂವ್ (ಹಾ), ಅಟ್ಟರಗಾ, ಮೆಹಕರ್, ಸಾಯಗಾಂವ್, ಹುಲಸೂರು, ಗಡಿಗಂವಡಗಾಂವ್ ಹಾಗೂ ಮೀರಖಲ್ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಮನ್ನಾಏಖೇಳಿ ಗ್ರಾಮದವರೆಗೆ ಸಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಶಾಂತ್ ಕೋಟಗಿರಾ ವಹಿಸಿದ್ದರು. ಈ ಸಂದರ್ಭದಲ್ಲಿ ಭಂತೆ ಕರುಣಾ ಗಣಮಂತಿ, ಕರಣೇಶ್ವರ್ ಮಹಾಸ್ವಾಮಿ ಹಾಗೂ ಧಮ್ಮಪಾಲ ಜಯದೇವ್ ಅವರು ಧಮ್ಮ ದೇಶನೆ ನೀಡಿದರು. ಬುಡಾ ಅಧ್ಯಕ್ಷ ವಿನೋದ್ ಅಪ್ಪೆ, ಅಮೃತರಾವ್ ಚಿಮಕೋಡೆ, ಹನುಮಂತರಾವ್ ಚವ್ಹಾಣ್, ಪ್ರವೀಣ್ ಹಣಮಶೆಟ್ಟಿ, ಶಂಕರಗೌಡ, ಶಿವಶಂಕರ್ ಕಾಮಶೆಟ್ಟಿ, ವಿಲಾಸ್ ಮೋರೆ, ಬಸವರಾಜ್ ವಂಕೆ, ಮಾರುತಿ ಭಂಗಾರೆ, ಧನರಾಜ್ ಸೂರ್ಯವಂಶಿ, ದಿಲೀಪ್ ಪಾಟೀಲ್, ಹನುಮಂತ್ ಕಾಂಬಳೆ, ಸಂತೋಷ್ ಪಾಟೀಲ್ ಹಾಗೂ ತ್ರಿಮುಖ್ ಜೀವಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.






