ಬೀದರ್ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ : ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ

ಬೀದರ್ : ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತದ ಬಿರುಕು ಆವರಿಸಿದ್ದು, ಜಿಲ್ಲೆಯ ಕೆಲ ಕಾಂಗ್ರೆಸ್ ನಾಯಕರು ಸೇರಿಕೊಂಡು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಂಗಳೂರಿನ 'ರ‍್ಯಾಡಿಸನ್ ಬ್ಲೂ' ಎನ್ನುವ ಹೋಟೆಲ್ ನಲ್ಲಿ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕಿನ ಕೆಲ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ಜಿಲ್ಲೆಯಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಕಾರ್ಯಕರ್ತರಿಗೆ ಯಾವುದೇ ರೀತಿಯ ಸ್ಥಾನಮಾನ ಸಿಗುತ್ತಿಲ್ಲ. ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಸ್ಥಾನಮಾನ ಸಿಕ್ಕಿದೆ. ಇದರಿಂದಾಗಿ ನಮ್ಮಲ್ಲಿ ಅಸಮಾಧಾನವಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಕಳೆದಿವೆ. ನಮಗೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನ್ನುವ ಭಾವನೆ ಮೂಡುತ್ತಿಲ್ಲ. ಆದರೆ ಜಿಲ್ಲಾ ಬಿಜೆಪಿ ನಾಯಕರಲ್ಲಿ ಅತೀ ಸಂಭ್ರಮ ಕಾಣಿಸುತ್ತಿದೆ. ಜಿಲ್ಲೆಯ ಬಿಜೆಪಿ ಶಾಸಕರು ಅವರ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಇರದ ಖುಷಿ ನಮ್ಮ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅವರಲ್ಲಿ ಕಾಣುತ್ತಿದೆ ಎಂದು ಸಭೆಯಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಅಭಿಪ್ರಾಯಪಟ್ಟರು ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಜೊತೆಗೆ ಆಂತರಿಕ ಹೊಂದಾಣಿಕೆಯ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರ ಬದಲಾವಣೆ ಕೂಡ ಆಗಬೇಕಿದೆ. ಅವರು ಪಕ್ಕಾ ಹಿಂದುತ್ವವಾದಿ, ಆರ್ ಎಸ್ ಎಸ್, ವಿಶ್ವ ಹಿಂದು ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿದ್ದರು. ಅಂಥವರನ್ನು ತಂದು ಕಾಂಗ್ರೆಸ್ ಅಧ್ಯಕ್ಷ ಮಾಡಿದ್ದಾರೆ. ಅವರು ಇಲ್ಲಿವರೆಗೆ ಒಂದೇ ಒಂದು ಬಿಜೆಪಿಯ ಯೋಜನೆಯನ್ನು ವಿರೋಧಿಸಿಲ್ಲ ಎನ್ನುವ ವಿಷಯ ಕೂಡ ಸಭೆಯಲ್ಲಿ ವ್ಯಕ್ತವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು ಬರುತ್ತಿದ್ದು, ಜಿಲ್ಲೆಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದ್ದರೆ ಮಾತ್ರ ನಾವು ಆ ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಆ ಸ್ಥಾನಗಳು ಕಳೆದುಕೊಳ್ಳಬೇಕಾಗುತ್ತದೆ. ನಾವು ಯಾರನ್ನು ವಿರೋಧ ಮಾಡದೇ ಇದನ್ನು ಸರಿಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಸಭೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೊಂದು ಸಭೆ ನಡೆಸಿ ನಂತರ ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗುತ್ತೇವೆ. ನಂತರದ ದಿನಗಳಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಇದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಮೂಲಗೆ, ರಮೇಶ್ ಡಾಕುಳಗಿ, ವಿದ್ಯಾಸಾಗರ್ ಸಿಂಧೆ, ಅಫ್ಸರ್ ಮಿಯ್ಯಾ, ಕೆ. ಪುಂಡಲೀಕರಾವ್, ಗುಂಡುರೆಡ್ಡಿ ಹಾಗೂ ಪಂಡಿತ್ ಚಿದ್ರಿ ಸೇರಿದಂತೆ ಇತರರು ಭಾವಹಿಸಿದ್ದರು ಎಂದು ತಿಳಿದು ಬಂದಿದೆ.
ಎಲ್ಲ ಪಕ್ಷಗಳಲ್ಲೂ ವೈಮನಸ್ಸು ಇರುತ್ತದೆ. ಅದನ್ನೆಲ್ಲ ಕುಳಿತು ಬಗೆಹರಿಸಿಕೊಳ್ಳಬೇಕಾಗುತ್ತದೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವ ಕೆಲಸ ನಾವು ಮಾಡಿಲ್ಲ. ಒಳ್ಳೆಯ ರೀತಿಯಿಂದ ಕೆಲಸ ನಿಭಾಯಿಸಿಕೊಂಡು ಬರುತ್ತಿದ್ದೇವೆ. ನನಗೆ ನೀಡಿದ ಕೆಲಸ ನಾನು ಚೆನ್ನಾಗಿ ಮಾಡುತ್ತಿದ್ದೇನೆ. ಇಲ್ಲಿನ ಭಿನ್ನಮತಿಯರ ನಡೆಯನ್ನು ಹೈಕಮಾಂಡ್ ಗಮನಿಸುತ್ತಿದ್ದು, ಬರುವ ದಿನಗಳಲ್ಲಿ ಎಲ್ಲವೂ ಸರಿಪಡಿಸುತ್ತಾರೆ.
- ಬಸವರಾಜ್ ಜಾಬಶೆಟ್ಟಿ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿ







