ಬ್ರಿಮ್ಸ್ ಆಸ್ಪತ್ರೆಯ ಅವ್ಯವಹಾರದ ತನಿಖೆ ನಡೆಸಲು ವೈದ್ಯಕೀಯ ಶಿಕ್ಷಣ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಪತ್ರ

ಬೀದರ್ : ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯ ಅವ್ಯವಹಾರದ ತನಿಖೆ ನಡೆಸಲು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಪತ್ರ ಬರೆದಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಔಷಧ ಖರೀದಿಯಲ್ಲೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸರ್ಕಾರಿ ಆಸ್ಪತ್ರೆಗಳು ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಬೇಕು. ಆದರೆ ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶಟಕಾರ್ ಮತ್ತು ಇತರರ ಮೇಲೆ ಗುರುತರ ಆರೋಪಗಳಿದ್ದು, ಇವರ ಕರ್ತವ್ಯಲೋಪ ನಿರ್ಲಕ್ಷ್ಯದಿಂದಾಗಿ ರೋಗಿಗಳು ನರಳುವಂತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಆದಷ್ಟು ಶೀಘ್ರದಲ್ಲಿ ಬ್ರಿಮ್ಸ್ ಆಸ್ಪತ್ರೆಗೆ ಸಂಪೂರ್ಣ ಕಾಯಕಲ್ಪ ನೀಡಿ, ಸಮಸ್ಯೆಗಳನ್ನು ಪರಿಹರಿಸಿ ಸಾಮಾನ್ಯ ಜನರಿಗೆ ಉತ್ತಮ ಮತ್ತು ಗುಣಮಟ್ಟದ ಆರೋಗ್ಯ ಸೇವೆ ದೊರಕುವಂತೆ ಮಾಡಬೇಕು ಎಂದು ಅವರು ಪತ್ರದ ಮೂಲಕ ಕೋರಿದ್ದಾರೆ.
ಬ್ರಿಮ್ಸ್ ಆಸ್ಪತ್ರೆ ಇತ್ತೀಚೆಗೆ ಒಂದಲ್ಲಾ ಒಂದು ವಿವಾದಕ್ಕೆ ಸಿಲುಕುತ್ತಿದ್ದು, ಸರ್ಕಾರವನ್ನು ಮತ್ತು ಜಿಲ್ಲಾ ಉಸ್ತುವಾರಿ ಸಚಿವನಾದ ನನ್ನನ್ನು ಮುಜುಗರಕ್ಕೆ ಈಡು ಮಾಡುತ್ತಿದೆ. ಅವ್ಯವಸ್ಥೆಯ ಆಗರ ಬ್ರಿಮ್ಸ್ ಆಸ್ಪತ್ರೆ, ಬ್ರಿಮ್ಸ್ ಆಸ್ಪತ್ರೆಯ ಕರ್ಮಕಾಂಡ ಎಂಬೆಲ್ಲಾ ಶೀರ್ಷಿಕೆಗಳೊಂದಿಗೆ ನಿರಂತರವಾಗಿ ಮಾಧ್ಯಮಗಳಲ್ಲಿ ವರದಿಗಳು, ಪ್ರಸಾರ ಪ್ರಕಟವಾಗುತ್ತಿವೆ. ಮಳೆ ಬಂದಾಗ ಆಸ್ಪತ್ರೆಯ ನೆಲದಿಂದ ನೀರಿನ ಬುಗ್ಗೆ ಉಕ್ಕುತ್ತದೆ. ಈ ಬಗ್ಗೆ ನಾನು ಲಿಖಿತ ಸೂಚನೆ ನೀಡಿದ್ದರೂ ದುರಸ್ತಿ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳ ಹಿಂದೆ ನೇಮಕಾತಿ ಪ್ರಕ್ರಿಯೆಯ ಯಾವುದೇ ನಿಯಮ ಪಾಲಿಸದೆ, ಸರ್ಕಾರದ ಪರವಾನಗಿ ಪಡೆಯದೆ, ಸಂದರ್ಶನವನ್ನೂ ನಡೆಸದೆ ನೇಮಕಾತಿ ಮಾಡಲಾಗಿದ್ದ 40ಕ್ಕೂ ಹೆಚ್ಚು ತಜ್ಞ ವೈದ್ಯರಿಗೆ ವೇತನ ನೀಡದೆ ವಜಾ ಮಾಡಲಾಗಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ ರೋಗಿಗಳಿಗೆ ಮತ್ತು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಂತಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.







