ಅನುಭವ ಮಂಟಪದಿಂದ ಶರಣರ ತತ್ವಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಾಗುವುದು : ಸಿಎಂ ಡಿ.ಕೆ.ಶಿವಕುಮಾರ್

ಬೀದರ್ : ಬಸವಕಲ್ಯಾಣದ ಅನುಭವ ಮಂಟಪ ಕಾಮಗಾರಿಗೆ 742 ಕೋಟಿ ರೂ. ಯೋಜನೆ ರೂಪಿಸಲಾಗಿದ್ದು, ಈಗಾಗಲೇ 480 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಣದ ಕೊರತೆಯಾಗದಂತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಬಸವಣ್ಣ ಹಾಗೂ ಶರಣರ ತತ್ವಗಳನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ಆಚಾರ-ವಿಚಾರಗಳನ್ನು ಇಡೀ ರಾಜ್ಯ ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ತಮ್ಮ ಮೊದಲ ಪ್ರವಾಸವನ್ನು ಅನುಭವ ಮಂಟಪದಿಂದಲೇ ಆರಂಭಿಸಿದ್ದೇನೆ. ಈ ಐತಿಹಾಸಿಕ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ ಅನುದಾನದ ಕೊರತೆಯಾಗಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಬರ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಬರವನ್ನು ಒಂದೇ ದಿನದಲ್ಲಿ ಘೋಷಿಸಲು ಸಾಧ್ಯವಿಲ್ಲ. ಮಳೆ ಕೊರತೆ, ಬೆಳೆ ಪರಿಸ್ಥಿತಿ ಸೇರಿದಂತೆ ಎಲ್ಲ ಅಂಶಗಳನ್ನು ಪರಿಶೀಲಿಸಿ ಸಮೀಕ್ಷೆ ನಡೆಸಿದ ಬಳಿಕವೇ ಬರ ಘೋಷಣೆ ಮಾಡಲಾಗುತ್ತದೆ. ಈ ಸಂಬಂಧ ಚರ್ಚೆ ನಡೆಸಲು ತಾವು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ :
ಬೀದಿಬದಿ ವ್ಯಾಪಾರಿಗಳ ತೆರವು ಕುರಿತು ಮಾತನಾಡಿದ ಅವರು, ಯಾರೂ ಆತಂಕಪಡುವ ಅಗತ್ಯವಿಲ್ಲ. ಅವರಿಗೆ ಸೂಕ್ತ ಪರ್ಯಾಯ ಸ್ಥಳ ಕಲ್ಪಿಸುವುದರ ಜೊತೆಗೆ ತಳ್ಳುವ ವಾಹನಗಳನ್ನೂ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಭೇಟಿಯ ವೇಳೆ ಮುಖ್ಯಮಂತ್ರಿ ಅನುಭವ ಮಂಟಪದ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿ ಕೆಲಕಾಲ ಧ್ಯಾನದಲ್ಲೂ ತೊಡಗಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್, ಸಂಸದ ಸಾಗರ್ ಖಂಡ್ರೆ , ಶಾಸಕರಾದ ರಹೀಮ್ ಖಾನ್, ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಮಾಲಾ ಬಿ ನಾರಾಯಣ, ಎಲ್. ಕೆ ಅತಿಕ್, ವಿಜಯ ಸಿಂಗ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗಿರೀಶ್ ಬಡೋಲೆ, ಎಸ್ಪಿ ಪ್ರದೀಪ್ ಗುಂಟಿ ಹಾಗೂ ಅಕ್ಕ ಪಡೆಯ ರಾಜ್ಯ ಸಲಹೆಗಾರ್ತಿ ಶೈನಿ ಗುಂಟಿ ಸೇರಿದಂತೆ ಹಲವಾರು ನಾಯಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.






