ಬೀದರ್ | ಬ್ರಿಮ್ಸ್ ಆಸ್ಪತ್ರೆಗೆ ಮಹಿಳಾ ಆಯೋಗದ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ, ಪರಿಶೀಲನೆ

ಬೀದರ್ : ನಗರದ ಬ್ರಿಮ್ಸ್ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಾ. ನಾಗಲಕ್ಷ್ಮೀ ಚೌಧರಿ ಅವರು ಆಸ್ಪತ್ರೆಯ ಕೆಲ ವಾರ್ಡ್‌ಗಳನ್ನು ಸುತ್ತಿ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದರು. ಕೆಲ ರೋಗಿಗಳನ್ನು ಮಾತನಾಡಿಸಿ, ಚಿಕಿತ್ಸೆಯ ಗುಣಮಟ್ಟ, ಸ್ವಚ್ಛತೆಯ ಬಗ್ಗೆ ಕೇಳಿದರು. ಆಸ್ಪತ್ರೆಯ ಛಾವಣಿ ಮೇಲೆ ತೆರಳಿ ಪರಿಶೀಲಿಸಿದ ಅವರು, ಸೋಲಾರ್‌ಗಳು ಕೆಟ್ಟು ಹೋಗಿದ್ದರ ಬಗ್ಗೆ ವೈದ್ಯಾಧಿಕಾರಿಗಳಲ್ಲಿ ಮಾಹಿತಿ ಪಡೆದರು.
ನಂತರದಲ್ಲಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು, ನನಗೆ ಸೂಪರ್ವೈಸರ್ ಒಬ್ಬರು ಕಿರುಕುಳ ನೀಡುತ್ತಿದ್ದಾರೆ. ನನಗೆ ನ್ಯಾಯ ನೀಡಿ, ಇಲ್ಲದಿದ್ದರೆ ನಾನು ಸಾಯುವೆ ಎಂದು ಅಧ್ಯಕ್ಷೆಯ ಕಾಲಿಗೆ ಎರಗಿ ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ಸೂಕ್ತವಾದ ತನಿಖೆ ನಡೆಸಲು ಸೂಚಿಸಲಾಗುವುದು. ಈ ತಾಯಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ನಾನು ಕೆಲ ದಿನಗಳ ಹಿಂದೆ ಈ ಆಸ್ಪತ್ರೆಗೆ ಭೇಟಿ ನೀಡಿದಾಗ ಇಲ್ಲಿ ಅಷ್ಟೊಂದು ಸ್ವಚ್ಛತೆ ಇರಲಿಲ್ಲ. ಆಸ್ಪತ್ರೆ ಛಾವಣಿ ಮೇಲೆ ಪಾರಿವಾಳಗಳು ಸತ್ತು ಬಿತ್ತಿದ್ದವು. ವಾಟರ್ ಟ್ಯಾಂಕ್ ಓಪನ್ ಇತ್ತು. ನೀರಿನ ಸ್ವಚ್ಛತೆ ಇರಲಿಲ್ಲ. ಆದರೆ ಈಗ ವಾಟರ್ ಟ್ಯಾಂಕ್ ಎಲ್ಲ ಸ್ವಚ್ಛಗೊಳಿಸಿ ಅದರ ಮೇಲೆ ಕಬ್ಬಿಣದ ಮುಚ್ಚಳಿಕೆ ಹಾಕಿದ್ದಾರೆ. ಎಲ್ಲವನ್ನು ಪೇಂಟಿಂಗ್ ಮಾಡಿದ್ದಾರೆ. ಶೌಚಾಲಯ ಕೂಡ ತಾತ್ಕಾಲಿಕವಾಗಿ ಸರಿಪಡಿಸಿದ್ದು, ಅದನ್ನು ಖಾಯಂ ಆಗಿ ಸರಿಪಡಿಸಬೇಕಾಗಿದೆ ಎಂದು ಹೇಳಿದರು.





