ತೀವ್ರ ಚಳಿ ಹಿನ್ನೆಲೆ: ಬೀದರ್ ಜಿಲ್ಲೆಯ ಶಾಲೆಗಳ ಶನಿವಾರದ ಸಮಯ ಬದಲಾವಣೆ

ಬೀದರ್ : ವಿಪರೀತ ಚಳಿ ಹಾಗೂ ತೀವ್ರ ಶೀತಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಮಯವನ್ನು ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ) ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಚಳಿಗಾಲ ತೀವ್ರವಾಗಿದ್ದು, ಬೆಳಿಗ್ಗೆ ಸಮಯದಲ್ಲಿ ಶೀತಗಾಳಿ ಹೆಚ್ಚಾಗಿ ಬೀಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ಆಗಮಿಸಲು ತೀವ್ರ ತೊಂದರೆಯಾಗುತ್ತಿದೆ. ಶನಿವಾರದಂದು ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 12:00 ಗಂಟೆವರೆಗೆ ಶಾಲಾ ಸಮಯ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಲಾ ಸಮಯ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು.
ಶಿಕ್ಷಕರ ಸಂಘದ ಮನವಿಯನ್ನು ಪರಿಗಣಿಸಿದ ಇಲಾಖೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶನಿವಾರದಂದು ಶಾಲಾ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಆದೇಶದಂತೆ, ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶನಿವಾರದಂದು ಶಾಲಾ ಸಮಯವನ್ನು ಬೆಳಿಗ್ಗೆ 9:50 ರಿಂದ ಮಧ್ಯಾಹ್ನ 1:30 ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮುಖ್ಯಗುರುಗಳಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.







