ಹುಲಸೂರ್ | ಅಕ್ರಮ ಮರಳು ಸಾಗಿಸಿದರೆ ಪ್ರಕರಣ ದಾಖಲಿಸಲಾಗುವುದು: ಡಿವೈಎಸ್ಪಿ ಬಲ್ಲಪ್ಪ ನಂದಗಾವಿ

ಹುಲಸೂರ್ : ಮಾಂಜ್ರಾ ನದಿಯಲ್ಲಿ ನಡೆಯುತ್ತಿರುವ ಅನಧಿಕೃತ ಮರಳು ಸಾಗಣೆಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಭಾಲ್ಕಿ ಉಪವಿಭಾಗದ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಅವರು ಎಚ್ಚರಿಕೆ ನೀಡಿದ್ದಾರೆ.
ಸಮೀಪದ ಭಾಲ್ಕಿ ತಾಲೂಕಿನ ವಾಂಝರಖೆಡ್ ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಅವರು ಎಚ್ಚರಿಸಿದ್ದಾರೆ.
ಹುಲಸೂರ್ ಪಟ್ಟಣ ಸೇರಿದಂತೆ ಸಾಯಗಾಂವ್ ಹೋಬಳಿಯ ವಾಂಝರಖೇಡ್, ಕೊಂಗಳಿ, ಅಟ್ಟರಗಾ, ಮಾಣಿಕೇಶ್ವರ್, ಮೇಹಕರ್, ಹಲಸಿ, ತುಗಾಂವ್ ಸೇರಿದಂತೆ ಮಾಂಜ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಟ್ತ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಅನಧಿಕೃತವಾಗಿ ಮರಳು ಸಾಗಣೆ ನಡೆಸುತ್ತಿರುವುದು ಕಂಡುಬಂದರೆ ಸಂಬಂಧಪಟ್ಟ ವಾಹನ ಮಾಲಕರು, ಚಾಲಕರು ಹಾಗೂ ಮರಳು ತುಂಬುವ ಕೆಲಸದಲ್ಲಿ ತೊಡಗಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅನಧಿಕೃತ ಮರಳು ಸಾಗಣೆಗೆ ಸಹಕಾರ ನೀಡುವವರು ಅಥವಾ ಮಾಹಿತಿ ಇದ್ದರೂ ಪೊಲೀಸರಿಗೆ ತಿಳಿಸದೆ ನಿರ್ಲಕ್ಷ್ಯ ವಹಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಂಜ್ರಾ ನದಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಣೆ ತಡೆಯಲು ಈಗಾಗಲೇ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಅಡ್ಡಿಪಡಿಸುವುದು, ಹಲ್ಲೆ ನಡೆಸುವುದು ಅಥವಾ ಅವರ ಜೀವಕ್ಕೆ ಅಪಾಯ ಉಂಟು ಮಾಡುವ ಯಾವುದೇ ಕೃತ್ಯಗಳಲ್ಲಿ ತೊಡಗಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕರು ಕಾನೂನನ್ನು ಗೌರವಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.






