ಪಡಿತರ ಚೀಟಿಗೆ ಇ-ಕೆವೈಸಿ ಕಡ್ಡಾಯ: ಜೂನ್ 30ರವರೆಗೆ ಕಾಲಾವಕಾಶ

ಬೀದರ್: ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಇ-ಕೆವೈಸಿ ಮಾಡಿಸಲು ಜೂ.30ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರ ಇ-ಕೆವೈಸಿ, ಬೆರಳಚ್ಚು (ಬಯೋಮೆಟ್ರಿಕ್) ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಪರಿಶೀಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ತಾಲೂಕುವಾರು ಬಾಕಿ ಇರುವ ಇ-ಕೆವೈಸಿ ವಿವರ : ಔರಾದ್ (1636), ಬಸವಕಲ್ಯಾಣ (4691), ಭಾಲ್ಕಿ (2919), ಬೀದರ್ (12873), ಹುಮನಾಬಾದ್ (2585), ಕಮಲನಗರ್ (1245), ಹುಲಸೂರ್ (160), ಚಿಟಗುಪ್ಪಾ (1379) ಸೇರಿ ಒಟ್ಟು 27,488 ಪಡಿತರದಾರರ ಇ-ಕೆವೈಸಿ ಮಾಡಿಸುವುದು ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಸಂಗ್ರಹ ಕಾರ್ಯ ಪ್ರತೀ ದಿನ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಚಾಲ್ತಿಯಲ್ಲಿರುತ್ತದೆ. ಇ-ಕೆವೈಸಿ ಮಾಡಿಸಲು ಜೂ.30ರವರೆಗೆ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಸರ್ಕಾರವೇ ನ್ಯಾಯಬೆಲೆ ಅಂಗಡಿಯವರಿಗೆ ಹಣ ಪಾವತಿ ಮಾಡುತ್ತಿರುವುದರಿಂದ ಪಡಿತರ ಚೀಟಿದಾರರು ಈ ಪ್ರಕ್ರಿಯೆಗೆ ಯಾವುದೇ ಹಣ ಸಂದಾಯ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣ ಉಚಿತವಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಧಾರ್ ಮತ್ತು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ವ್ಯತ್ಯಾಸವಿದ್ದಲ್ಲಿ ಅಂತವರು ತಮ್ಮ ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ ಮಾಡಿಸಿಕೊಂಡಲ್ಲಿ ಸರಿಯಾಗುವುದು. ಬೆರಳಚ್ಚು ಹೊಂದಾಣಿಕೆ ಆಗದ ಪಡಿತರ ಚೀಟಿ ಸದಸ್ಯರು ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.