ಗೃಹ ಸಚಿವ ಪರಮೇಶ್ವರ್ ಅವರಿಗೆ ಸೇರಿದ ಸಂಸ್ಥೆಗಳ ಮೇಲಿನ ಈಡಿ ದಾಳಿ ಖಂಡನೀಯ : ಪ್ರದೀಪ್ ನಾಟೇಕಾರ್

ಬೀದರ್ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸೇರಿದಂತೆ ಅವರ ಮನೆ ಮೇಲೆ ಈಡಿ ದಾಳಿ ಮಾಡಿರುವುದು ಖಂಡನೀಯ ಎಂದು ದಲಿತ ಮುಖಂಡ, ಭಾರತೀಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ನಾಟೇಕಾರ್ ಹೇಳಿದ್ದು, ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಬೀದರ್ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್ ನಾಟೇಕಾರ್, ಪರಮೇಶ್ವರ್ ಅವರು ದಲಿತ ಸಮಾಜದ ಕಣ್ಣು. ಅವರ ಶಿಕ್ಷಣ ಸಂಸ್ಥೆಯಿಂದ ಇದುವರೆಗೆ 40,000 ಇಂಜಿನಿಯರ್ ಮತ್ತು 10 ಸಾವಿರ ವೈದ್ಯರು ತೇರ್ಗಡೆಯಾಗಿದ್ದಾರೆ. ಇದಲ್ಲದೇ ಅವರು ಮುಂದಿನ ಸಿಎಂ ಆಗುವ ಎಲ್ಲಾ ಅರ್ಹತೆ ಕೂಡ ಹೊಂದಿದ್ದಾರೆ. ಈ ಕಾರಣಕ್ಕಾಗಿ ದಲಿತ ಸಮುದಾಯದ ಓರ್ವ ಉತ್ತಮ ನಾಯಕನನ್ನು ತುಳಿಯುವ ಷಡ್ಯಂತ್ರ ಬಿಜೆಪಿ ಮತ್ತು ಆರೆಸ್ಸೆಸ್ ಮಾಡುತ್ತಿದೆ. ಅವರ ವಿರುದ್ಧದ ಈಡಿ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಆರೋಪಿಸಿದರು.
ಡಾ. ಕಾಶಿನಾಥ್ ಚಲ್ವಾ ಮಾತನಾಡಿ, ಗೃಹ ಸಚಿವ ಜಿ. ಪರಮೇಶ್ವರ್ ಅವರು ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದಾರೆ. ಅದೊಂದು ಸಾರ್ವಜನಿಕ ಸಂಸ್ಥೆಯಾಗಿದೆ. ಯಾರು ಬೇಕಾದರೂ ಅದರ ಅಧ್ಯಕ್ಷರಾಗಬಹುದು. ಇಂತಹ ಒಳ್ಳೆಯ ಕಾರ್ಯ ಮಾಡುವ ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮತ್ತು ನೈತಿಕವಾಗಿ ಕುಗ್ಗಿಸುವ ಕಾರ್ಯ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸುಂದರ ಜ್ಞಾನಿ, ಸೂರ್ಯಕಾಂತ ಸಾದುರೆ, ಪ್ರಮುಖರಾದ ಶರಣು ಫುಲೆ, ನಾಗಸೇನ್ ಗಾಯಕವಾಡ್, ರಾಜಕುಮಾರ್ ಪ್ರಸಾದೆ, ಭೀಮರಾವ್ ಮಾಲಗತ್ತಿ ಹಾಗೂ ಪಂಡಿತ ಭಂಗೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.







