ಶಿಥಿಲಾವಸ್ಥೆಗೆ ತಲುಪಿದ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆಯು ಸಮರ್ಪಕ ಪ್ರಸ್ತಾವನೆ ಸಲ್ಲಿಸುತ್ತಿಲ್ಲ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಶಾಲಾ ಕೊಠಡಿಗಳ ಶಿಥಿಲಾವಸ್ಥೆ ತಲುಪಿದರ ಬಗ್ಗೆ ಮಾಧ್ಯಮದ ಮುಖಾಂತರ ನನ್ನ ಗಮನಕ್ಕೆ ಬಂದಿದೆ. ಆದರೆ ನಾವು ಕಾಲ ಕಾಲಕ್ಕೆ ಆದೇಶ ಕೊಟ್ಟರೂ ಶಿಕ್ಷಣ ಇಲಾಖೆಯಿಂದ ನಮಗೆ ಸಮರ್ಪಕವಾದ ಪ್ರಸ್ತಾವನೆ ಬರುತ್ತಿಲ್ಲ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ಇಂದು ನಗರದ ನೆಹರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಮ್ಮ ಸರ್ಕಾರ ಬರುವುದಕ್ಕಿಂತ ಮುಂಚೆಯಿಂದ ಹೇಳುತ್ತಿದ್ದೇನೆ. ನಮ್ಮ ಹತ್ತಿರ ದುಡ್ಡು ಇದೆ. ದುಡ್ಡಿನ ಕೊರತೆ ಇಲ್ಲ. ನೀವು ಎಲ್ಲೆಲ್ಲಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಕಟ್ಟಡದ ಅವಶ್ಯಕತೆ ಇದೆಯೋ ಅದೆಲ್ಲ ನಮ್ಮ ಗಮನಕ್ಕೆ ತರಬೇಕು ಎಂದು ಶಿಕ್ಷಣ ಇಲಾಖೆಯವರಿಗೆ ಜವಾಬ್ದಾರಿಯನ್ನಾಗಿ ಮಾಡಿದ್ದೇವೆ. ಏನಾದರೂ ಅನಾಹುತವಾದರೆ ನಿಮ್ಮ ಮೇಲೆಯೇ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೂಡ ನೀಡಿದ್ದೇವೆ. ಆದರೆ ಅವರು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ ಎಂದು ತಿಳಿಸಿದರು.
ಇದರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಕೆ ಕೆ ಆರ್ ಡಿ ಬಿ ಯಿಂದ ಹೆಚ್ಚಿನ ಅನುದಾನ ಇದಕ್ಕೆ ಬಳಸಲಾಗುವುದು. ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಕೋಣೆಗಳ ಸಂಖ್ಯೆ ಹೆಚ್ಚಿವೆ, ಕೋಣೆಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಸುಮಾರು 1 ಸಾವಿರ 1 ನೂರು ಕೋಣೆಗಳು ಶಿಥಿಲಾವಸ್ಥೆಯಲ್ಲಿದೆ. ಎಲ್ಲವೂ ನೆಲಸಮ ಮಾಡುವುದಕ್ಕೆ ಹೇಳಲಾಗಿದೆ. ನೆಲಸಮಗೊಳಿಸಲು ಪ್ರತ್ಯಕವಾದ ಅನುದಾನ ಇಡಲಾಗಿದೆ. ಅನುದಾನದ ಕೊರತೆ ಇಲ್ಲ ಎಂದರು.
ಬೀದರ್ ನಗರ ಪಾಲಿಕೆ ಮಹಾನಗರ ಪಾಲಿಕೆಯನ್ನಾಗಿ ಮಾಡಲಾಗಿದೆ. ಭಾಲ್ಕಿ ಪುರಸಭೆ ಕೂಡ ನಗರ ಪಾಲಿಕೆ ಮಾಡಬೇಕು ಎನ್ನುವ ಪ್ರಸ್ತಾವನೆ ತಯಾರಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿರೀಶ್ ಬದೋಲೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಉಪಸ್ಥಿತರಿದ್ದರು.







