ಬೀದರನ್ನು ಉತ್ತಮ ರಂಗ ಕಲಾವಿದರನ್ನು ಸೃಷ್ಟಿಸುವ ಜಿಲ್ಲೆಯಾಗಿ ಮಾಡಲು ಪ್ರಯತ್ನಿಸಲಾಗುವುದು : ನಾಗರಾಜ್ ಮೂರ್ತಿ

ಬೀದರ್ : ಮುಂದಿನ ದಿನಗಳಲ್ಲಿ ಬೀದರ್ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಉತ್ತಮ ರಂಗ ಕಲಾವಿದರನ್ನು ಸೃಷ್ಟಿಸುವ ಜಿಲ್ಲೆಯಾಗಿ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ್ ಮೂರ್ತಿ ಭರವಸೆ ನೀಡಿದರು.
ಇಂದು ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಜಿಲ್ಲೆಯ ವಿವಿಧ ಕಲಾವಿದರ ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿ ಕೇವಲ ಬೆಂಗಳೂರಿನಲ್ಲಿ ಕುಳಿತು ಕೆಲಸ ಮಾಡಿದ್ದರೆ ಸಾಲದು ಎಂದು ತಿಳಿದು ಅಧ್ಯಕ್ಷನಾದ ಮೇಲೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಪ್ರಥಮ ಸಭೆ ನಡೆಸಿದ್ದೇನೆ. ಇದೇ ಭಾಗದ ಸುಮಾರು ನಾಲ್ಕು ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದೇವೆ. ಆದರೆ ಅವರು ಬೀದರ್ ಜಿಲ್ಲೆಗೆ ಹೆಚ್ಚಿನ ಸಮಯ ನೀಡದೆ ಇರುವುದರಿಂದ ಖುದ್ದು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಹವ್ಯಾಸಿ ಕಲಾವಿದರು ಹಾಗೂ ವೃತ್ತಿ ರಂಗ ಕಲಾವಿದರ ಸಮಸ್ಯೆಗಳು ಅರಿಯಲು ಬಂದಿದ್ದೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹವ್ಯಾಸಿ ಚಟುವಟಿಕೆಗಳು ಬೆಳೆಯುತ್ತಿಲ್ಲ. ಇದು ಕ್ರೀಯಾಶೀಲತೆ ಕಳೆದುಕೊಂಡಿದೆ. ಒಂದು ಕಾಲದಲ್ಲಿ ಇಲ್ಲಿನ ಸಮುದಾಯ ಹೆಸರುಗಳಿಸಿತ್ತು. ಆದರೆ ಈಗ ಹೇಳಿಕೊಳ್ಳುವಂತಹ ಕೆಲಸ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ರಂಗ ಕಲೆ, ಹವ್ಯಾಸಿ ಕಲೆ ಉಳಿಸಲು ಜಿಲ್ಲೆಯ ಹಿರಿಯ ಕಲಾವಿದರಿಂದಲೆ ಕಾರ್ಯಾಗಾರ ಆಯೋಜಿಸಿ, ಯುವ ಪೀಳಿಗೆಗೆ ರಂಗ ಕಲೆ ಬಗ್ಗೆ ತರಬೇತಿ ನೀಡಲು ಮುಂದೆ ಬಂದರೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು. ಮಾರ್ಚ್ ತಿಂಗಳ ಒಳಗಾಗಿ ಸಭೆ ಕರೆದು, ತರಬೇತಿ ಎಲ್ಲಿ ಮತ್ತು ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ತಿಳಿಸಿ ಅದಕ್ಕೆ ಅನುದಾನ ಕಲ್ಪಿಸಲಾಗುವುದು ಎಂದರು.
ಮಾ.27 ರಂದು ವಿಶ್ವ ರಂಗ ದಿನಾಚರಣೆ ಅಂಗವಾಗಿ ಬೀದರ್ ನಲ್ಲಿಯೂ ಕೂಡ ಕಾರ್ಯಾಗಾರ ಆಯೋಜಿಸಲು ಅಕಾಡೆಮಿಯಿಂದ 30 ಸಾವಿರ ರೂ. ಅನುದಾನ ನೀಡಲಿದೆ. ಅಂದು ಬೀದಿ ನಾಟಕ ಮತ್ತು ವೃತ್ತಿ ನಾಟಕ ನಡೆಸಲಾಗುವುದು. ಇಂತಹ ಕಾರ್ಯಕ್ರಮಗಳಿಂದ ಹವ್ಯಾಸಿ ಮತ್ತು ವೃತ್ತಿ ಕಲಾವಿದರ ಕಲೆಯನ್ನು ಬೆಳೆಸಲು ಅನುಕೂಲವಾಗಲಿದೆ ಎಂದು ತಿಳಿಸಿದ ಅವರು, ಅಕಾಡೆಮಿಯ ಕಾರ್ಯಕ್ರಮಗಳು ಆಯೋಜಿಸಲು ಡಾ. ಜಗನ್ನಾಥ ಹೆಬ್ಬಾಳೆ ಅವರನ್ನು ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಿ ಅವರು ಘೋಷಣೆ ಮಾಡಿದರು.
ಜಿಲ್ಲೆಯ ಹಲವು ರಂಗ ಕಲಾವಿದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಜಿಲ್ಲೆಯ ರಂಗ ಕಲಾವಿದರನ್ನು ಬೆಳೆಸಲು ಅಕಾಡೆಮಿ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು. ಹಾಗೆಯೇ ಇಲ್ಲಿನ ಕಲಾವಿದರನ್ನು ಅಕಾಡೆಮಿ ನಿರ್ಲಕ್ಷಿಸುತಿದ್ದು, ರಾಜ್ಯ ಮಟ್ಟದಲ್ಲಿ ನಮ್ಮ ಜಿಲ್ಲೆಯ ಕಲಾವಿದರನ್ನು ಗುರುತಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ಹಿರಿಯ ರಂಗ ಕಲಾವಿದರಾದ ಸಂಗ್ರಾಮ್ ಏಂಗಳೆ, ಶಂಭುಲಿಂಗ್ ವಾಲ್ದೋಡ್ಡಿ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ, ಮಹೇಶ್ ಪಾಟೀಲ್, ಬಸವರಾಜ್ ಕಟ್ಟಿಮನಿ, ವಿಷ್ಣುಕಾಂತ್, ಶೇಷಪ್ಪ ಚಿಟ್ಟಾ, ದೇವಿದಾಸ್ ಚಿಮಕೋಡ್, ಎಸ್ ಬಿ ಕುಚಬಾಳ್, ತಮಟೆ ಕಲಾವಿದೆ ಕಮಳಮ್ಮ, ಸಂಜುಕುಮಾರ್ ಜುಮ್ಮಾ, ರಾಷ್ಟ್ರೀಯ ಬುಡಕಟ್ಟು ಪರಿಷತ್ ಕಾರ್ಯದರ್ಶಿ ಡಾ. ರಾಜಕುಮಾರ್ ಹೆಬ್ಬಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ, ನಿವೃತ್ತ ಪ್ರಾಧ್ಯಾಪಕ ಪ್ರೊ. ಉಮಾಕಾಂತ್ ಪಾಟೀಲ್, ಕವಿತಾ ಶಿವದಾಸ ಸ್ವಾಮಿ ಮತ್ತಿತರರು ಇದ್ದರು. ಸಂಘದ ಕಾರ್ಯದರ್ಶಿ ಸುನೀತಾ ಕೂಡ್ಲಿಕರ್ ಹಾಗೂ ನಿಜಲಿಂಗಪ್ಪ ತಗಾರೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.







