ಸಮಾನತಾವಾದಿಗಳು ಅಧಿಕಾರದಲ್ಲಿ ಬರಬೇಕು : ನಟ ಚೇತನ್ ಅಹಿಂಸಾ

ಚೇತನ್ ಅಹಿಂಸಾ
ಬೀದರ್ : ಪೆರಿಯಾರ್ ಮತ್ತು ಅಂಬೇಡ್ಕರ್ ಅವರು ನಾವು ಅಧಿಕಾರದಲ್ಲಿ ಬರಬೇಕು ಎಂದು ಹೇಳುತ್ತಾರೆ. ನಾವು ಎಂದರೆ ಸಮಾನತಾವಾದಿಗಳು ಅಧಿಕಾರಕ್ಕೆ ಬರಬೇಕು ಎಂದು ನಟ ಚೇತನ್ ಹೇಳಿದರು.
ಇಂದು ಕಮಲನಗರ್ ತಾಲ್ಲೂಕಿನ ನಿಡೋದಾ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಅಸಮಾನತೆ ವ್ಯವಸ್ಥೆಯೇ ನಮ್ಮ ಶತ್ರು. ಈ ವ್ಯವಸ್ಥೆಯಲ್ಲಿ ಆದಿವಾಸಿ, ದಲಿತ, ಮಹಿಳೆಯರನ್ನು ವಿರೋಧಿಸಲಾಗುತ್ತದೆ. ಅದೊಂದು ವಿಪರ್ಯಾಸವೇ ಸರಿ. ಇದನ್ನು ನಾವು ಗುರುತಿಸಿಕೊಂಡು ಒಂದು ಪರ್ಯಾಯವಾದ ಶಕ್ತಿ ಕಟ್ಟಬೇಕು ಎಂದು ಪರೋಕ್ಷವಾಗಿ ರಾಜಕೀಯ ಪಕ್ಷ ಕಟ್ಟುವುದರ ಬಗ್ಗೆ ತಿಳಿಸಿದರು.
ಉತ್ತಮ ಸಮಾಜ ಎಂದರೆ ಅದೆಷ್ಟು ಜ್ಞಾನಪೀಠ ಪ್ರಶಸ್ತಿ ಪಡೆಯುತ್ತೇವೆ, ಅದೆಷ್ಟು ದೊಡ್ಡ ಬಜೆಟ್ ಸಿನೆಮಾ ಮಾಡುತ್ತೇವೆ ಎಂದಲ್ಲ. ಉತ್ತಮ ಸಮಾಜ ಎಂದರೆ ಅಂಬೇಡ್ಕರ್ ಕಂಡಂತಹ ಸಮ-ಸಮಾಜ, ಸಮಾನತೆಯ ಸಮಾಜವಾಗಿದೆ. ಉತ್ತಮ ಸಮಾಜ ನಿರ್ಮಾಣ ಮಾಡಿದರೆ ಕರ್ನಾಟಕ ಗಟ್ಟಿಯಾಗುತ್ತದೆ. ನಾವು ಹುಟ್ಟುವ ಮೊದಲಿನದ್ದು ನಮ್ಮ ಆಯ್ಕೆಯಾಗಿರಲ್ಲ. ನಾವು ಹುಟ್ಟಿದ ಮೇಲೆ ನಾವು ಮಾಡುವ ಕೆಲಸ ನಮ್ಮ ಆಯ್ಕೆಯಾಗಿರುತ್ತದೆ. ನಾವು ಸಮ ಸಮಾಜಕ್ಕಾಗಿ ನಿಂತುಕೊಂಡಾಗ ನಾವೆಲ್ಲ ಸಮಾನತಾ ವಾದಿಗಳಾಗುತ್ತೇವೆ. ಅದು ನಮ್ಮ ಸಿದ್ಧಾಂತವಾದರೆ ಬಹಳ ಉತ್ತಮ ಎಂದರು.
ಬಾಬಾಸಾಹೇಬರಿಗೆ ಮೂರ್ತಿ, ವ್ಯಕ್ತಿ ಆರಾಧನೆ ಇಷ್ಟ ಇರಲಿಲ್ಲ. ವ್ಯಕ್ತಿ ಆರಾಧನೆ ಮಾಡಿದಷ್ಟು ಪ್ರಜಾಪ್ರಭುತ್ವಕ್ಕೆ ಕಷ್ಟ ಆಗುತ್ತದೆ. ನನ್ನನ್ನು ಪೂಜಿಸಬೇಡಿ, ನನ್ನನ್ನು ಓದಿ ಎಂದು ಅವರು ಹೇಳುತ್ತಿದ್ದರು. ನಾವು ಅವರನ್ನು ಪೂಜಿಸುತ್ತೇವೆ ಆದರೆ ಅವರ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲ್ಲ. ಅವರ ವಿಚಾರಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸುಭಾಷ್ ಲಾಧಾ, ಸುಧಾಕರ್ ಕೊಳ್ಳುರ್, ಶಿವು ಕಾಂಬಳೆ, ರಹೀಮ್ ಸಾಬ್, ರಾಹುಲ್ ಖಂದಾರೆ, ಕಪಿಲ್ ಗೋಡಬೋಲೆ, ನಂದಾದೀಪ್ ಬೋರಾಳೆ, ಗಣಪತಿ ವಾಸುದೇವ್, ಸುಧಾಕರ್ ಕೊಳ್ಳುರ್, ಆಕಾಶ್ ಸಿಂಧೆ ಹಾಗೂ ಗ್ರಾಮಸ್ಥರು ಸೇರಿದಂತೆ ಅನೇಕರು ಭಾಗವಹಿಸಿದ್ದರು.







